]ಕಂಡದೆಲ್ಲವು ಬೇಕು ಎಂದಾಗ ಬದುಕು ಕ್ಷೀಣಿಸುತ್ತಾ ಹೋಗುತ್ತದೆ: ಶ್ರೀಗಳು
ಶಿಗ್ಗಾವಿ; ಸೂರ್ಯನ ಮುಂಜಾನೆಯ ಕಿರಣಗಳು ಮೈಮೇಲೆ ಬಿದ್ದಾಗ ಸಿಗುವ ಸುಖವನ್ನು ಮೈತುಂಬ ಧರಿಸಿದ ಬಂಗಾರ ಬೆಳ್ಳಿಯ ಆಭರಣಗಳು ನೀಡಲಾರವು. ಮನುಷ್ಯ ಸಾಕು ಎಲ್ಲಾ ಇದೆ ಎಂದುಕೊಂಡಾಗ ಅವನ ಬದುಕು ದೊಡ್ಡದಾಗುತ್ತದೆ, ಕಂಡದೆಲ್ಲವು ಬೇಕು ಎಂದುಕೊಂಡಾಗ ಬದುಕು ಕ್ಷೀಣಿಸುತ್ತಾ ಹೋಗುತ್ತದೆ ಎಂದು ಹತ್ತಿಮತ್ತೂರಿನ ವಿರಕ್ತ ಮಠದ ಶ್ರೀ ಮ.ನಿ.ಪ್ರ ನಿಜಗುಣ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ವಿರಕ್ತಮಠದಲ್ಲಿ ಸೋಮವಾರ ಸಾಯಂಕಾಲ ನಡೆದ 2ನೇ ದಿನದ 31ನೇ ಶರಣ ಸಂಸ್ಕೃತಿ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಕ್ತರನ್ನು ಅರ್ಥಮಾಡಿಕೊಳ್ಳುವ ಸ್ವಾಮಿಗಳು, ಸ್ವಾಮಿಗಳನ್ನು ಅರ್ಥ ಮಾಡಿಕೊಳ್ಳುವ ಭಕ್ತರಿಂದ ಮಠಗಳ ಕೀರ್ತಿ ಹೆಚ್ಚಾಗುತ್ತದೆ. ಮಠದ ಪ್ರವಚನಗಳು ನಿಲ್ಲುತ್ತಿರುವ ಈ ಸಂದರ್ಭದಲ್ಲಿ ಶಿಗ್ಗಾವಿ ವಿರಕ್ತಮಠಧ ಶ್ರೀಗಳು ಭಕ್ತರ ಮನಸ್ಸನ್ನು ಗೆದ್ದು 9 ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಆಚರಿಸುವ ಮೂಲಕ ಪ್ರತಿದಿನ ಸಾಧು ಸಂತರಿಂದ ಪ್ರವಚನಗಳನ್ನು ಜನರಿಗೆ ಕೇಳಿಸಿ ಅವರ ಬದುಕನ್ನು ಹಸನಾಗಿಸುವ ಮೂಲಕ ಮಠವನ್ನು ಗೆಲ್ಲಿಸಿದ್ದಾರೆ ಎಂದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ತಾಲೂಕಾ ಬಿ.ಜೆ.ಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ಸಂಗನಬಸವ ಶ್ರೀಗಳು ಯಾವುದೇ ಅಪೇಕ್ಷೆಗಳಿಲ್ಲದೆ ಸೇವೆಮಾಡುತ್ತಿದ್ದಾರೆ. ಕಾಯಕದಿಂದ ನಾಯಕನನ್ನಾಗಿಸಿ ಬದುಕನ್ನು ಹಸನುಗೊಳಿಸುವುದೇ ಶರಣ ಸಂಸ್ಕೃತಿಯ ಗುರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಣ್ಣಿಗೇರಿಯ ಸುಕ್ಷೇತ್ರ ಸೀತಾಗಿರಿಯ ಸ.ಸ.ಡಾ. ಎ.ಸಿ.ವಾಲಿ ಮಹಾರಾಜರು ಪ್ರವಚನ ನೀಡಿದರೆ, ಸಂಗೀತ ಸೇವೆಯನ್ನು ಕಲಘಟಗಿ ತಾಲೂಕಿನ ಬಸನಕೊಪ್ಪದ ವೇ.ಮೂ. ಗದಿಗಯ್ಯ ಹಿರೇಮಠ ಗವಾಯಿಗಳು ನೀಡಿದರೆ ತಬಲಾ ಸೇವೆಯನ್ನು ವಂದಲಿಯ ಬಸವರಾಜ ಹೂಗಾರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿರಕ್ತ ಮಠದ ಸಂಗನಬಸವ ಶ್ರೀಗಳು, ಅಡಿವೆಪ್ಪಾ ಕುರಿಯವರ, ಶಶಿಕಾಂತ ರಾಠೋಡ, ನಾಗಪ್ಪಾ ಬೆಂತೂರ, ವಿಶ್ವನಾಥ ವಾಲಿಶೆಟ್ಟರ, ಸೇರಿದಂತೆ ಗಣ್ಯರು, ಭಕ್ತರು ಇದ್ದರು.