ಗುಳೇಗುಡ್ಡ

ಸರ್ಕಾರದ ಆರ್ಥಿಕ ನೆರವಿಗೆ ನೇಕಾರರ ಒತ್ತಾಯ

ಸರ್ಕಾರದ ಆರ್ಥಿಕ ನೆರವಿಗೆ ನೇಕಾರರ ಒತ್ತಾಯ
ಗುಳೇದಗುಡ್ಡದ ನೇಕಾರ ಮುಖಂಡರು ನೇಕಾರರಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗುಳೇದಗುಡ್ಡ 02: ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೂ ಸರ್ಕಾರ ರೂ. 5000 ಆರ್ಥಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪಟ್ಟಸಾಲಿ ನೇಕಾರ ಸಮಾಜದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಗುಳೇದಗುಡ್ಡ ಪಟ್ಟಣದಲ್ಲಿ ಬುಧವಾರದಂದು ಉಪತಹಶೀಲ್ದಾರ ವಿರೇಶ ಬಡಿಗೇರ ಅವರಿಗೆ  ಮನವಿ ಸಲ್ಲಿಸಿದ ಅವರು, ರಾಜ್ಯ ಸರ್ಕಾರ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲ ಸಮೂದಾಯಕ್ಕೂ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಸರ್ಕಾರ ನೇಕಾರರನ್ನು ಕಡೆಗಣಿಸಿದೆ. ರೈತ ಮತ್ತು ನೇಕಾರ ದೇಶದ ಎರಡು ಕಣ್ಣು ಎಂದು ಕರೆಯಲಾಗುತ್ತದೆ. ಆದರೆ ಸರ್ಕಾರ ಎಲ್ಲ ಸಮೂದಾಯಕ್ಕೂ ಘೋಷಿಸಿದ ಲಾಕ್‌ಡೌನ್ ಪರಿಹಾರದಲ್ಲಿ ನೇಕಾರರನ್ನು ಕೈ ಬಿಟ್ಟಿರುವುದು ಸಮಂಜಸವಲ್ಲ ಎಂದು ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. 

ಲಾಕ್‌ಡೌನ್ ಆದಾಗಿನಿಂದ ನೇಕಾರರ ಬದುಕು ಚಿಂತಾಜನಕವಾಗಿದೆ. ಮಗ್ಗಗಳು ನಿಂತು ಹೋಗಿವೆ. ಇಂಥಹ ಸಂದರ್ಭದಲ್ಲಿ ಸರ್ಕಾರ ನೇಕಾರ ಕುಟುಂಬಗಳಿಗೂ ರೂ. 5000 ಪ್ಯಾಕೇಜ್ ಘೋಷಿಸಿ ನೇಕಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕೆಂದು ಪಟ್ಟಸಾಲಿ ನೇಕಾರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಕಾಂತ ಶೇಖಾ ಒತ್ತಾಯಿಸಿದ್ದಾರೆ. 

ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷ ಈರಣ್ಣ ಶೇಖಾ, ಉಪಾಧ್ಯಕ್ಷ ಆನಂದ ತಿಪ್ಪಾ, ಕಾರ್ಯದರ್ಶಿ ಗುರು ಕಾಳಿ, ಮಲ್ಲೇಶಪ್ಪ ಬೆಣ್ಣಿ, ಮುರುಗೇಶ ರಾಜನಾಳ, ಶಿವಾನಂದ ಎಣ್ಣಿ, ಕೂಡ್ಲೆಪ್ಪ ಕಲ್ಯಾಣಿ, ವಿನೋದ ಮದ್ದಾನಿ, ಸೋಮು ಕಲಬುರ್ಗಿ, ಪ್ರಶಾಂತ ಉದ್ನೂರ, ಪ್ರಕಾಶ ರೋಜಿ, ವಿವೇಕಾನಂದ ಪರಗಿ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ