ರೈತರ ಜಮೀನಿಗಳಿಗೆ ಕಾಗವಾಡ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರು..! ಕಂಗಾಲಾದ ರೈತರು..!!
ಕಾಗವಾಡ 11: ಪಟ್ಟಣದ ಶಿರಗುಪ್ಪಿ ಶುಗರ್ಸ ಸಕ್ಕರೆ ಕಾರ್ಖಾನೆಯ ತ್ಯಾಜ್ಯ, ಕೆಮಿಕಲ್ ಮಿಶ್ರಿತ ತ್ಯಾಜ್ಯ ನೀರು ಕಾರ್ಖಾನೆ ಪಕ್ಕದ ರೈತರ ಜಮೀನಿಗಳಿಗೆ ಹರಿದು ಬರುತ್ತಿದ್ದು, ಇದರಿಂದ ನೂರಾರು ಎಕರೆ ಜಮೀನು ಹಾಳಾಗುತ್ತಿದ್ದು, ಬೆಳೆದು ನಿಂತ ಕಬ್ಬು ಒಣಗಿ ಹೋಗುತ್ತಿದೆ. ರೈತರು ಈ ಕುರಿತು ಕಾರ್ಖಾನೆಯ ಆಡಳಿತ ಮಂಡಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಪಟ್ಟಣದ ರೈತ ಸಚೀನ ಚೌಗುಲೆ ಆರೋಪಿಸಿದ್ದಾರೆ.
ಅವರು ಸೋಮವಾರ ದಿ. 11 ರಂದು ತಮ್ಮ ಜಮೀನಿನಲ್ಲಿ ಹರಿದು ಬರುತ್ತಿರುವ ತ್ಯಾಜ್ಯ ನೀರು ತೋರಿಸುತ್ತಾ ಮಾಧ್ಯಮದರೊಂದಿಗೆ ಮಾಹಿತಿ ನೀಡುತ್ತಿದ್ದರು. ಕಾರ್ಖಾನೆ ಪ್ರಾರಂಭಗೊಂಡಾಗಿನಿಂದ ಇದೇ ರೀತಿ ತ್ಯಾಜ್ಯ ಮತ್ತು ಕೆಮಿಕಲ್ ಮಿಶ್ರಿತ್ ನೀರು ನಮ್ಮ ಜಮೀನಿಗೆ ಹರಿದು ಬರುತ್ತಿದೆ. ಇದರಿಂದ ಕೆಟ್ಟ ದುರ್ವಾಸನೆ ಪಸರಿಸುತ್ತಿದ್ದು, ಬೆಳೆಗೆ ಹಾನಿಯಾಗುತ್ತಿದೆ. ಬಾವಿ-ಬೋರವೆಲ್ಗಳಲ್ಲಿ ನೀರು ಸಹಿತ ಕಲುಷಿತಗೊಂಡಿದ್ದು, ಪ್ರಾಣಿಗಳು ಸಹ ಆ ನೀರು ಮುಟ್ಟಲು ಹಿಂಜರಿಯುತ್ತಿವೆ. ಇನ್ನೂ ಮನುಷ್ಯರಿಗೆ ಆ ನೀರಿನಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಕುರಿತು ಅನೇಕ ಬಾರಿ ಕಾರ್ಖಾನೆಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ತಹಶೀಲ್ದಾರ ಅವರು ಇತ್ತ ಗಮನ ಹರಿಸಿ, ತ್ಯಾಜ್ಯ ನೀರು ಬಿಡುತ್ತಿರುವ ಕಾರ್ಖಾನೆಯ ಮೇಲೆ ಸೂಕ್ತ ಕ್ರಮ ಕೈಗೊಂಡು, ನಮಗೆ ನ್ಯಾಯಾ ವದಗಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾಲಿನ್ಯ ನಿಯಂತ್ರಣ ಅಧಿಕಾರಿ ಶೋಭಾ ಪೋಳ ಅವರನ್ನು ಫೋನ್ ಮುಖಾಂತರ ಸಂಪರ್ಕಿಸಿದಾಗ ನಾನು ಬೆಳಗಾವಿ ವಿಭಾಗದ ಅಧಿಕಾರಿಯಾಗಿದ್ದು, ಪ್ರಭಾರಿಯಾಗಿ ಚಿಕ್ಕೋಡಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದು, ಎರಡು ಮೂರು ದಿನಗಳಲ್ಲಿ ಅಲ್ಲಿಗೆ ಭೇಟ್ಟಿ ನೀಡಿ, ಪರೀಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.