ಕಾಗವಾಡ

ಪುರಸಭೆ, ಪಪಂಗಳಿಗೆ ಮತದಾನ ಬಹುತೇಕ ಶಾಂತಿಯುತ

ಪುರಸಭೆ, ಪಪಂಗಳಿಗೆ ಮತದಾನ ಬಹುತೇಕ ಶಾಂತಿಯುತ

ಲೋಕದರ್ಶನ ವರದಿ 


ಕಾಗವಾಡ 27: ಬೆಳ್ಳಂಬೆಳಿಗ್ಗೆ ಹೊಗೆ ಮಂಜು, ಕೊರೆಯುವ ಚಳಿಯನ್ನು ಲೆಕ್ಕಿಸದೆ ಉಗಾರ ಪುರಸಭೆ, ಐನಾಪೂರ ಹಾಗೂ ಶೇಡಬಾಳ ಪಟ್ಟಣ ಪಂಚಾಯತ್‌ಗಳಲ್ಲಿ ಯಶಸ್ವಿಯಾಗಿ ಮತದಾನವಾಗಿದ್ದು, ಅಲ್ಲಲ್ಲಿ ಮಾತಿನ ಚಕಮಕಿ, ಸಣ್ಣಪುಟ್ಟ ಘರ್ಷಣೆ ಹೊರತು ಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿದೆ. 

  ಉಗಾರ ಪುರಸಭೆಯ 23 ಸ್ಥಾನಗಳಿಗೆ 69 ಜನರು ಸ್ಪರ್ದಿಸಿದ್ದಾರೆ. ಐನಾಪೂರ ಪಟ್ಟಣ ಪಂಚಾಯತ್ 19 ಸ್ಥಾನಗಳಿಗೆ 47 ಜನರು ಕಣದಲ್ಲಿದ್ದರೆ, ಶೇಡಬಾಳ ಪಪಂಗೆ 16 ಸ್ಥಾನಗಳಿಗೆ 49 ಜನರು ಅಭ್ಯರ್ಥಿಗಳು ಸ್ಪರ್ದಿಸಿದ್ದು ಅತ್ಯಂತ ಬಿರುಸಿನಿಂದ ನಡೆದ ಮತದಾನದಲ್ಲಿ 165 ಮಂದಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಿದರು. 

  ತಮ್ಮ ವಾರ್ಡಿನ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನಕ್ಕೆ ಮತದಾರರು ಸಾಲುಗಟ್ಟಿ ನಿಂತಿದ್ದರು. 

 ಯುವಕರಿಂದ ಹಿಡಿದು ವಯಸ್ಸಾದವರವರೆಗೆ ಮತದಾನದಲ್ಲಿ ಬಿರುಸಿನಿಂದ ಪಾಲ್ಗೊಂಡಿದ್ದರು. ರಾಜಕೀಯ ಪಕ್ಷಗಳ ಮುಖಂಡರು ತಮ್ಮವರ ಗೆಲುವಿಗೆ ಉತ್ಸಾಹದಿಂದ ದುಡಿಯುತ್ತಿದ್ದ ಬೆಳವಣಿಗೆ ಎಲ್ಲೆಡೆ ಕಂಡು ಬಂತು. ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಐನಾಪುರ ಶೇ. 78 ಶೇಡಬಾಳ ಶೇ. 81 ಉಗಾರ ಪುರಸಭೆ ಶೇ.75 ರಷ್ಟು ಮತದಾನವಾಗಿದೆ ಶಿರಗುಪ್ಪಿ ಗೃಆಮ ಪಂಚಾಯತಿಯ ಒಂದು ಸ್ಥಾನಕ್ಕಾಗಿ ಶೇ.72 ರಷ್ಟು ಮತದಾನವಾಗಿದೆ ಎಂದು ತಹಸೀಲ್ದಾರ ರಾಜೇಶ ಬುರ್ಲಿ ತಿಳಿಸಿದರು. 

  ಉಗಾರ ಪುರಸಭೆ, ಐನಾಪೂರ ಹಾಗೂ ಶೇಡಬಾಳ ಪಟ್ಟಣ ಪಂಚಾಯ್ತಿಗಳಲ್ಲಿ ಮತದಾನ ಬಿರುಸಿನಿಂದ ನಡೆಯಿತು. ಎಂದಿನಂತೆ ಈ ಬಾರಿಯೂ ಕೂಡ ಪರಸ್ಪರ ಸಂಬಂಧಿಕರು, ಸಹೋದರರು, ಅತ್ತೆ ಸೊಸೆಯರು ಕೂಡ ಕಣದಲ್ಲಿರುವುದು ವಿಶೇಷವಾಗಿದೆ. 

  ಮತದಾರರನ್ನು ಮತಗಟ್ಟೆಗೆ ಕರೆ ತರಲು ಪೈಪೋಟಿಯೇ ನಡೆದಿತ್ತು. ಕೊನೆಗಳಿಗೆವರೆಗೂ ಮತದಾರರನ್ನು ಓಲೈಸಲು ಪ್ರಯತ್ನಗಳಂತೂ ನಡದೇಯಿತ್ತು. 

 ಚುನಾವಣಾ ಮುನ್ನಾದಿನ ರವಿವಾರದಂದು ಕೆಲ ಪಕ್ಷದವರಿಂದ ಹಣ ಹೆಂಡದ ಹೊಳೆ ಹರಿಸಿದರೆ, ಬೇರೆ ಪಕ್ಷದವರಿಂದ ಸೀರೆ, ರವಿಕೆ, ಚಿಕನ್, ಮಟಗ್, ಮದ್ಯ ಹಾಗೂ ಸಾವಿರ ರೂ ನೋಟುಗಳನ್ನು ಮನೆ-ಮನೆಗೆ ಹಂಚಿ ಪ್ರಜಾತಂತ್ರ ವ್ಯವಸ್ಥೆಯನ್ನು ಕೆಡಿಸಿ ಚುನಾವಣೆಗಳೆಂದರೆ ಹಣ ಉಳ್ಳವರದು ಎಂದು ಸಾಬೀತು ಪಡಿಸಿದರು. 

   ಊರುಬಿಟ್ಟು ಬೆಂಗಳೂರು, ಮೈಸೂರು, ಮುಂಬೈ ಸೇರಿದಂತೆ ಹಲವಾರು ನಗರ ಪ್ರದೇಶ ಸೇರಿರುವ ಮತದಾರರನ್ನು ಕರೆ ತರಲು ಕೆಲ ಕಡೆ ವಿಶೇಷ ವಾಹನ ವ್ಯವಸ್ಥೆ ಬಸ್, ಟ್ರೇನ್ ಬುಕ್ಕಿಂಗ್ ಜೊತೆಗೆ ಖರ್ಚಿಗೆ ಫೋನ್, ಗೂಗಲ್ ಪೇ ಮಾಡಿ ಮತದಾರರನ್ನು ಕರೆಯಿಸಿದ್ದಾರೆ. 

  ಎಲ್ಲಾ ಚುನಾವಣೆಗಳಂತೆ ಈ ಬಾರಿ ನಡೆದ ಚುನಾವಣೆಯಲ್ಲೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ, ಎಂದು ಹಲವು ಜನರು ಮತಗಟ್ಟೆಗೆ ತೆರಳಿ ವಾಪಸ್ಸಾದ ಘಟಣೆ ಜರುಗಿದೆ. 


ಸುದ್ದಿ ಓದಿ