ಬೈಲಹೊಂಗಲ

ಮಂಗಲಾ ಮೆಟಗುಡ್ಡ ಅವರಿಗೆ ಮತ ನೀಡಿ: ಬೋಳನ್ನವರ

ಮಂಗಲಾ ಮೆಟಗುಡ್ಡ ಅವರಿಗೆ ಮತ ನೀಡಿ: ಬೋಳನ್ನವರ

ಲೋಕದರ್ಶನ ವರದಿ 


ಬೈಲಹೊಂಗಲ 19: ಬೆಳಗಾವಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಮಂಗಲಾ ಮೆಟಗುಡ್ಡ ಅವರಿಗೆ ಮತ ನೀಡಿ  ಜಿಲ್ಲೆಯ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸಬೇಕೆಂದು  ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತದಾರರಿಗೆ ಚಿತ್ರನಟ ಶಿವರಂಜನ ಬೋಳನ್ನವವರ ಹೇಳಿದರು. 

      ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಅವರ ಸಾನಿಧ್ಯದಲ್ಲಿ ನಡೆದ ಕನ್ನಡ ಚಿಂತಕರ ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಅವರು,  ಮಂಗಲಾ ಮೆಟಗುಡ್ಡ ಅವರು  ಕಳೆದ 3 ವರ್ಷಗಳಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.  5 ತಾಲೂಕುಗಳಲ್ಲಿ ಸಾಹಿತ್ಯ ಭವನ ಸ್ಥಾಪನೆ ಮಾಡಿದ್ದಾರೆ. ಇನ್ನೂಳಿದ ತಾಲುಕಿನಲ್ಲಿ ಕನ್ನಡ ಸಾಹಿತ್ಯ ಭವನವನ್ನು ನಿರ್ಮಿಸಲು ಪಣ ತೊಟ್ಟಿದ್ದಾರೆ.  ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಾದ್ಯಾಂತ ಸುಮಾರು 44 ಸಾಹಿತ್ಯ ಸಮ್ಮೇಳನ, 4 ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡಿ ಎಲ್ಲರನ್ನು ಒಗ್ಗೂಡಿಸಿ ವಿನೂತನ ಕಾರ್ಯ ಮಾಡಿದ್ದಾರೆ. ಜಿಲ್ಲೆಯಾದ್ಯಾಂತ ಮತ್ತೆ ಮಂಗಲಾ ಮೆಟಗುಡ್ಡ ಅವರನ್ನು ಸಾಹಿತ್ಯ ಚಿಂತಕರು ಹೆಚ್ಚಿನ ಒಲವು ತೋರಿ ಸಾಹಿತ್ಯ ಪರಿಷತಿನ ಚಿಂತಕರೇ ಅವರನ್ನು ಸ್ಪರ್ದೆಗೆ ನಿಲ್ಲಿಸಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲ ಸಾಹಿತ್ಯ ಪರಿಷತ್ತಿನ ಮತದಾರರು ಮಂಗಲಾ ಮೆಟಗುಡ್ಡ ಅವರಿಗೆ ಮತ ಚಲಾಯಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಜಿಲ್ಲೆಯ ಕನ್ನಡತನ ಹೆಚ್ಚಿಸಬೇಕೆಂದು ಮತದಾರರಲ್ಲಿ ವಿನಂತಿಸಿದರು. 

  ಸಾನಿಧ್ಯ ವಹಿಸಿದ್ದ  ಪೂಜ್ಯ ಪ್ರಭುನೀಲಕಂಠ ಸ್ವಾಮಿಜಿ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮಂಗಲಾ ಮೆಟಗುಡ್ಡ ಅವರು ಜಿಲ್ಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಮಹಿಳಾ ಅಭ್ಯರ್ಥಿಯಾಗಿದ್ದ ಇವರನ್ನು ಆಯ್ಕೆ ಮಾಡಿ ಕಿತ್ತೂರು ಚನ್ನಮ್ಮನ ನಾಡಿನ ಹಿರಿಮೆ ಗರಿಮೆ ಹೆಚ್ಚಿಸಬೇಕೆಂದರು. 

   ಕಲಾವಿದ ಸಿ.ಕೆ.ಮೆಕ್ಕೆದ ಮಾತನಾಡಿ ಕಿತ್ತೂರು ನಾಡಿನ ಚನ್ನಮ್ಮ ಅವರ ಹೋರಾಟ ಮೆಲುಕು ಹಾಕಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಗಲಾ ಮೆಟಗುಡ್ಡ ಅವರನ್ನು  ಕನ್ನಡಾಂಬೆಯ ಸೇವೆ ಸಲ್ಲಿಸಲು ಮತದಾರರು ಮರು ಆಯ್ಕೆ ಮಾಡಬೇಕೆಂದರು. 

      ತಾಲೂಕಾ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮನ್ನವರ, ರಾಜ್ಯ ವಿಜ್ಞಾನ ಪರಿಷತ್ ಕೇಂದ್ರ ಸಮಿತಿ ಸದಸ್ಯೆ ಮೀನಾಕ್ಷಿ ಕುಡಸೋಮನ್ನವರ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ ಮಂಗಲಾ ಮೆಟಗುಡ್ಡ ಅವರಿಗೆ ಮತ್ತೊಮ್ಮೆ ಅವಕಾಶ ಸಿಗಬೇಕೆಂದರು. 

     ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಕಸಾಪ ಮಾಜಿ ತಾಲೂಕಾಧ್ಯಕ್ಷ ಈಶ್ವರ ಹೋಟಿ, ಪುರಸಬೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ,  ಶಿಕ್ಷಕ ಸಂಘದ ಧುರೀಣರಾದ ಎಸ್‌.ಡಿ.ಗಂಗನ್ನವರ, ಬಿ.ಕೆ.ತಲ್ಲೂರ, ಬಿ.ವಿ.ಬಾನಿ ಮಾತನಾಡಿ, ಜಿಲ್ಲೆಯಾದ್ಯಾಂತ ಮಂಗಲಕ್ಕ ಮೆಟಗುಡ್ಡ ಅವರ ಪರ ಸಾಹಿತ್ಯಾಭಿಮಾನಿಗಳು ಬೆಂಬಲ ನೀಡಿದ್ದು ಸಂತೋಷಕರ ಎಂದರು. 

    ಸಭೆಯಲ್ಲಿ ಉದ್ಯಮಿ ವಿಜಯ ಮೆಟಗುಡ್ಡ, ಸುಭಾಸ ತುರಮರಿ, ಸುನೀಲ ಮರಕುಂಬಿ, ಪ್ರಪುಲ ಪಾಟೀಲ ಅಲ್ಲದೇ ತಾಲೂಕಿನ ವಿವಿಧ  ಗ್ರಾಮಗಳ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ