ಮುಂಡರಗಿ: ವಿಬಿಜಿ ರಾಮ್ ಜಿ ನೆರವು, ಸ್ವಾವಲಂಬನೆಗೆ ಸಾಥ್ ನೀಡಿದ ದನದದೊಡ್ಡಿ
ಮುಂಡರಗಿ 26: ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಯ ಅನುದಾನ ಹಾಗೂ ಸ್ವಂತ ದುಡಿಮೆಯ ಹಣವನ್ನು ಸದ್ಬಳಕೆ ಮಾಡಿಕೊಂಡು ದನದ ದೊಡ್ಡಿ ನಿರ್ಮಿಸಿಕೊಳ್ಳುವ ಮೂಲಕ ಡೋಣಿ ಗ್ರಾಮದ ರೈತ ಮಳ್ಳಪ್ಪ ಸತ್ಯಣ್ಣವರ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಮಳ್ಳಪ್ಪ ಅವರು ಈ ಹಿಂದೆ ಕೇವಲ ಎರಡು ಹಸುಗಳನ್ನು ಹೊಂದಿದ್ದರು.
2026-27ನೇ ಸಾಲಿನಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ದೊರೆತ ಅನುದಾನಕ್ಕೆ ತಮ್ಮ ಸ್ವಂತ ಹಣ ಹಾಗೂ ಶ್ರಮವನ್ನು ಸೇರಿಸಿ ಸುಸಜ್ಜಿತ ದನದ ದೊಡ್ಡಿ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಹೈನುಗಾರಿಕೆಗೆ ಮತ್ತಷ್ಟು ಉತ್ತೇಜನ ದೊರೆತಿದ್ದು, ಪ್ರಸ್ತುತ ನಾಲ್ಕು ಹಸುಗಳು, ಮೂರು ಕರುಗಳು ಹಾಗೂ ಎರಡು ಟಗರುಗಳನ್ನು ಸಾಕುತ್ತಿದ್ದಾರೆ.ಜಮೀನಿನ ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಯನ್ನು ಬಳಸಿಕೊಂಡು ಏನಾದರೂ ಮಾಡಬೇಕೆಂಬ ಮಳ್ಳಪ್ಪ ಅವರ ಆಸೆಗೆ ವಿಬಿಜಿ ರಾಮ್ ಜಿ ಯೋಜನೆಯ 62 ಸಾವಿರ ಧನ ಸಹಾಯ ಅನುಕೂಲವಾಗಿದೆ.
ಇದರೊಂದಿಗೆ ಅವರು ವೈಯಕ್ತಿಕವಾಗಿಯು ತಮ್ಮ ಬಳಿಯಿದ್ದ ಒಂದಿಷ್ಟು ಹಣವನ್ನು ಸೇರಿಸಿ ದನದೊಡ್ಡಿ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಂಡಿದ್ದಾರೆ.ನಾಲ್ಕು ಹಸುಗಳ ಪೈಕಿ ಮೂರು ಹಸುಗಳು ಪ್ರತಿದಿನ 30ರಿಂದ 35 ಲೀಟರ್ ಹಾಲು ನೀಡುತ್ತಿವೆ. ಹಾಲು ಮಾರಾಟದಿಂದ ದಿನಕ್ಕೆ ಹೆಚ್ಚು ಕಡಿಮೆ 1500 ಆದಾಯ ಸಿಗುತ್ತಿದ್ದು, ತಿಂಗಳಿಗೆ ಸುಮಾರು 40ರಿಂದ 45 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿ ಆಯ್ದುಕೊಂಡು ಆರ್ಥಿಕವಾಗಿ ಸದೃಢರಾಗಿರುವ ಮಳ್ಳಪ್ಪ, ಸರ್ಕಾರದ ಯೋಜನೆಗಳು ಸದುಪಯೋಗಪಡಿಸಿಕೊಂಡರೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ವಿಶ್ವಾಸದಿಂದ ನುಡಿಯುತ್ತಾರೆ.