ವೆಂಕಟಾಪುರ ಗ್ರಾಮದ ಸಂತ್ರಸ್ಥರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ; ಕುಟುಂಬಕ್ಕೆ ಸಾಂತ್ವನ; ಸಿದ್ದರ ಉಪಗ್ರಾಮ ಮಾಡಲು ಸಚಿವರ ನಿರ್ದೇಶನ
ಧಾರವಾಡ, 29: ಕಳೆದ ಶುಕ್ರವಾರ ಜು.26 ಸಂಜೆ ಸುಮಾರಿಗೆ ಸುರಿದ ಅತಿಯಾದ ಮಳೆಯಿಂದ ನೆನೆದ ಗೋಡೆ ಕುಸಿದು, ಮರಣ ಹೊಂದಿದ್ದ ವೆಂಕಟಾಪೂರ ಗ್ರಾಮದ ಸಿದ್ದರ ಕಾಲೋನಿಯ ರೈತ ಯಲ್ಲಪ್ಪ ರಾಮಣ್ಣ ಹಿಪ್ಪಿಯವರ 45 ಅವರ ಮನೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಂದು ಮದ್ಯಾಹ್ನ ಭೇಟಿ ನೀಡಿ, ಯಲ್ಲಪ್ಪ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಖಾಲಿ ಇರುವ ಪಕ್ಕದ ಮನೆಯ ಗೋಡೆ ಕುಸಿದು ಸ್ಥಳದಲ್ಲಿದ್ದ ಯಲ್ಲಪ್ಪ ಹಿಪ್ಪಿಯವರ ಅವರು ಮರಣ ಹೊಂದಿ, ಅವರ ಹೆಂಡತಿ ಹನಮವ್ವ ಯ. ಹಿಪ್ಪಿಯವರ 40 ಹಾಗೂ ಅವರು ಮಗಳು ಯಲ್ಲವ್ವ ಯ. ಹಿಪ್ಪಿಯವರ 15 ಗಾಯಗೊಂಡಿದ್ದರು.
ಹನುಮವ್ವ ಹಾಗೂ ಯಲ್ಲವ್ವ ಅವರಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಯಲ್ಲಪ್ಪನ ಕುಟುಂಬಕ್ಕೆ ಪರಿಹಾರ ವಿತರಣೆ ಗೋಡೆ ಕುಸಿತದಿಂದ ಮರಣಹೊಂದಿದ್ದ ಯಲ್ಲಪ್ಪ ಅವರ ಕುಟುಂಬಕ್ಕೆ ಸ್ಥಳೀಯ ಶಾಸಕರ ಸಮ್ಮತಿಯೊಂದಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ರೂ.4 ಲಕ್ಷ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.1 ಲಕ್ಷ ಸೇರಿ ಒಟ್ಟು 5 ಲಕ್ಷ ರೂ.ಗಳ ಪರಿಹಾರವನ್ನು ಜುಲೈ 27 ರಂದು ವಿತರಿಸಿದ್ದಾರೆ.
ಸಿದ್ದರ ಉಪಗ್ರಾಮ ಘೋಷಣೆಗೆ ಸಚಿವರ ನಿರ್ದೇಶನ ಸುಮಾರು 30 ವರ್ಷಗಳ ಹಿಂದೆ ಪೂನೆ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ವೆಂಕಟಾಪುರ ಎಂಬಲ್ಲಿ ಇಂದಿರಾ ಆವಾಸ್ ಯೋಜನೆಯಡಿ ನವಗ್ರಾಮ ನಿರ್ಮಿಸಿ, ಮನೆಗಳನ್ನು ಕಟ್ಟಿಸಿ ನೀಡಲಾಗಿದೆ. ಕಾಲಾಂತರದಲ್ಲಿ ವಲಸೆ ಬಂದ ಹಾಗೂ ಗ್ರಾಮದ ಮನೆರಹಿತ ಕುಟುಂಬಗಳು ಸರಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ಇವರಿಗೆ ಹಕ್ಕು ಪತ್ರ ನೀಡಲು ಅನುವಾಗುವಂತೆ ಸಿದ್ದರ ಉಪಗ್ರಾಮ ಘೋಷಿಸಬೇಕೆಂದು ಸಚಿವರು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸ್ಥಳೀಯ ಶಾಸಕರಾದ ವಿನಯ ಕುಲಕರ್ಣಿ ಅವರ ಸೂಚನೆಯಂತೆ ಸಿದ್ದರ ಉಪಗ್ರಾಮ ಘೋಷಣೆಗೆ ಈಗಾಗಲೇ ಕ್ರಮವಹಿಸಲಾಗಿದೆ. ಈ ಸಂಬಂಧಿತ ಕಡತ ತಹಶೀಲ್ದಾರ ಹಂತದಲ್ಲಿದ್ದು, ಶೀಘ್ರದಲ್ಲಿ ಕಂದಾಯ ಇಲಾಖೆಗೆ ಸಲ್ಲಿಸಿ, ಸಿದ್ದರ ಉಪಗ್ರಾಮ ಮಾಡಲಾಗುತ್ತದೆ. ಈ ಉಪಗ್ರಾಮ ವ್ಯಾಪ್ತಿಯ 32 ಕುಟುಂಬಗಳಿಗೆ ಹಕ್ಕು ಪತ್ರ, ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಸಚಿವರ ಭೇಟಿ.ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವೆಂಕಟಾಪುರ ಗ್ರಾಮದ ಸಿದ್ದರ ಸಮುದಾಯ ಭವನದಲ್ಲಿ ಜಿಲ್ಲಾಡಳಿತದಿಂದ ನಿನ್ನೆ ಸಂಜೆಯಿಂದ ಆರಂಭಿಸಿರುವ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಪರೀಶೀಲಿಸಿದರು.
ಕಾಳಜಿ ಕೇಂದ್ರದಲ್ಲಿ ಸಿದ್ದರ ಸಮುದಾಯದ ಸುಮಾರು 32 ಕುಟುಂಬಗಳು ಆಶ್ರಯ ಪಡೆದಿವೆ. ಇವರೆಲ್ಲರೂ ಗುಡಿಸಲು, ಜೊಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ವಾಸಸ್ಥಳದ ಹಕ್ಕು ಪತ್ರ ನೀಡಿ, ಸರಕಾರದಿಂದ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಸಚಿವರು ತಿಳಿಸಿದರು.
ಮಳೆ ನಿಲ್ಲುವವರೆಗೆ ಕಾಳಜಿ ಕೇಂದ್ರದಲ್ಲಿ ಸುರಕ್ಷಿತವಾಗಿ ಉಳಿಯುವಂತೆ ನಿರಾಶ್ರಿತರಲ್ಲಿ ಮನವಿ ಮಾಡಿದ ಸಚಿವರು, ಕಾಳಜಿ ಕೇಂದ್ರದಲ್ಲಿ ಊಟ, ಉಪಹಾರ, ಚಹಾ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯವಿದ್ದಲ್ಲಿ ಆರೋಗ್ಯ ತಪಾಸಣೆ, ಓಷಧಿ ವಿತರಣೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆಗೆ ಭೇಟಿ,ಗಾಯಾಳುಗಳ ಆರೋಗ್ಯ ವಿಚಾರಣೆ ಸಚಿವ ಸಂತೋಷ ಲಾಡ್ ಅವರು ವೆಂಕಟಾಪುರ ಗ್ರಾಮ ಭೇಟಿ ನಂತರ ಗಾಯಾಳುಗಳು ದಾಖಲಾಗಿರುವ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡಿರುವ ಹನಮವ್ವ ಹಿಪ್ಪಿಯವರ, ಯಲ್ಲವ್ವ ಹಿಪ್ಪಿಯವರ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಉತ್ತಮ ಆರೈಕೆ ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ಅವರಿಗೆ ಸಚಿವರು ನಿರ್ದೇಶಿಸಿದರು. ಗಾಯಾಳುಗಳು ಆರೋಗ್ಯವಾಗಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಸ್ ತಿಳಿಸಿದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ಗುಳೇದಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷ ರಮೇಶ ಹೊಸಮನಿ, ಉಪಾಧ್ಯಕ್ಷ ಚಂದ್ರಶೇಖರ ಡೊಕ್ಕನ್ನವರ, ಪಿಡಿಓ ಲೀಲಾವತಿ ಓಲೆಕಾರ, ಗ್ರಾಮ ಆಡಳಿತಾಧಿಕಾರಿ ಅರವಿಂದ ಚವ್ಹಾಣ ಸೇರಿದಂತೆ ಇತರ ಅಧಿಕಾರಿಗಳು, ಪ್ರಮುಖರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.