ಕಾಗವಾಡ

ಚಾರಿತ್ರ್ಯವಂತರಾಗಿ ಆತ್ಮಶುದ್ಧಿಯಿಂದ ಜೀವನ ನಡೆಸಿ: ವೀರೇಶ ಪಾಟೀಲ

ಚಾರಿತ್ರ್ಯವಂತರಾಗಿ ಆತ್ಮಶುದ್ಧಿಯಿಂದ ಜೀವನ ನಡೆಸಿ: ವೀರೇಶ ಪಾಟೀಲ

ಕಾಗವಾಡ 12: ಸ್ವಾಮಿ ವಿವೇಕಾನಂದರ ವಿಚಾರಗಳು ಯುವ ಪೀಳಿಗೆಯನ್ನು ಸಮ್ಮೋಹನಗೊಳಿಸಿಕೊಳ್ಳುತ್ತವೆ ಎಂಬ ವಿಶ್ವಾಸದಿಂದ ‘ರಾಷ್ಟ್ರೀಯ ಯುವ ದಿನ’ವೆಂದು ಆಚರಿಸಲಾಗುತ್ತಿದೆ ಎಂದು ಸದಲಗಾದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ವೀರೇಶ ಪಾಟೀಲ ಅಭಿಪ್ರಾಯಪಟ್ಟರು.

ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ಆಯೋಜಿಸಿದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಆಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮೇಲೆ ನಂಬಿಕೆಯನ್ನಿಟ್ಟುಕೊಂಡು ಪ್ರಜ್ಞಾವಂತರಾಗಿ, ಚಾರಿತ್ರ್ಯವಂತರಾಗಿ ಆತ್ಮಶುದ್ಧತೆಯಿಂದ ತಮ್ಮತನವನ್ನು ಬಿಟ್ಟುಕೊಡಲಾರದೇ ಬದುಕಬೇಕು. ಇದು ವಿವೇಕಾನಂದರ ಮಹಾದಾಸೆಯಾಗಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಬಿ.ಎ.ಪಾಟೀಲ ಮಾತನಾಡಿ, ಸ್ವಾಮಿ ವಿವೇಕಾನಂದರು ಈ ದೇಶ ಕಂಡ ಅಪ್ರತಿಮ ಸನ್ಯಾಸಿಯಾಗಿದ್ದಾರೆ. ಅವರು ತಮ್ಮ ಮಾತುಗಳಿಂದ ಸಿಡಿಲ ಮರಿಯಾಗಿದ್ದಾರೆ. ವಿದ್ಯಾರ್ಥಿ ಸಮೂಹವು ಅವರ ಜೀವನ ಚರಿತ್ರೆಯನ್ನು ಓದಿ ಜೀವನಾದರ್ಶಗಳನ್ನು  ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಮಹಾವಿದ್ಯಾಲಯದ ಉಪ-ಪ್ರಾಚಾರ್ಯ ಡಾ. ಎಸ್.ಎ.ಕರ್ಕಿ ಮಾತನಾಡಿ, ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶವನ್ನು ಸುತ್ತಿ ತಮ್ಮ ಜ್ಞಾನಾನುಭವಗಳನ್ನು ಉಕ್ತಿಗಳಿಂದ ಹೇಳಿ ಯುವಜನತೆಯನ್ನು ಎಚ್ಚರಗೊಳಿಸಿದ್ದಾರೆಯೆಂದರು.

ಪ್ರೊ. ಮೆ.ವ್ಹಿ.ಎಸ್.ತುಗಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಡಾ.ಆರ್.ಎಸ್.ಕಲ್ಲೊಳಿಕರ್ ವಂದಿಸಿದರು. ಕು. ಭಾಗ್ಯಶ್ರೀ ಚಿಂಚಲೆ ಹಾಗೂ ರುಚಿತಾದೇಸಾಯಿ ನಿರೂಪಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿದವರು ಉಪಸ್ಥಿತರಿದ್ದರು.

ಸುದ್ದಿ ಓದಿ