ರಿಯಾ ಚಕ್ರವರ್ತಿಗೆ ವಿದ್ಯಾ ಬಾಲನ್ ಬೆಂಬಲ..!
ಮುಂಬೈ, ಸೆಪ್ಟೆಂಬರ್ ೧: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಾಜ್ ಪುತ್ ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿಗೆ ಸುಪ್ರಸಿದ್ದ ನಟಿ ವಿದ್ಯಾಬಾಲನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಿಯಾ ವಿರುದ್ದ ಮಾಧ್ಯಮಗಳು ಕೆಟ್ಟ ರೀತಿಯ ಪ್ರಚಾರ ನಡೆಸುತ್ತಿವೆ ಎಂದು ನಟಿಯರುಗಳಾದ ಮಂಚು ಲಕ್ಷ್ಮಿ, ಸ್ವರ ಭಾಸ್ಕರ್, ತಾಪ್ಸಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದು, ಈಗ ಈ ಪಟ್ಟಿಗೆ ವಿದ್ಯಾ ಬಾಲನ್ ಹೊಸ ಸೇರ್ಪಡೆಯಾಗಿದ್ದಾರೆ.
ರಿಯಾಗೆ ಬೆಂಬಲ ವ್ಯಕ್ತಪಡಿಸಿರುವ ಮಂಚು ಲಕ್ಷ್ಮಿಗೆ ವಿದ್ಯಾ ಬಾಲನ್ ಧನ್ಯವಾದ ಸಲ್ಲಿಸಿದ್ದಾರೆ. ಅತ್ಯಂತ ನೋವುಂಟುಮಾಡುವ ಸುಶಾಂತ್ ಸಾವು “ಮೀಡಿಯಾ ಸರ್ಕಸ್ “ ಆಗಿ ಪರಿವರ್ತನೆಗೊಡಿರುವುದು ನೋವುಂಟುಮಾಡಿದೆ ಎಂದು ವಿದ್ಯಾ ಹೇಳಿದ್ದಾರೆ.
ಓರ್ವ ಮಹಿಳೆಯಾಗಿ ರಿಯಾ ಕುರಿತು ಮಾಧ್ಯಮಗಳಲ್ಲಿ ಮುಂದುವರಿದಿರುವ ಕೆಟ್ಟ ಪ್ರಚಾರ ಕಳವಳ ಉಂಟು ಮಾಡಿದೆ. ತಪ್ಪಿತಸ್ಥೆ ಎಂದು ನಿರ್ಧಾರವಾಗುವವರೆಗೂ ಆಕೆ ನಿರಪರಾಧಿ, ದೇಶದ ನಾಗರೀಕರಿಗೆ ಸಂವಿಧಾನ ಕಲ್ಪಿಸಿರುವ ಹಕ್ಕುಗಳ ಜತೆಗೆ ಗೌರವ ನೀಡಬೇಕು, ತೀರ್ಪನ್ನು ನ್ಯಾಯಾಲಯಗಳಿಗೆ ಬಿಡಬೇಕು ಎಂದು ವಿದ್ಯಾ ಬಾಲನ್ ಮನವಿ ಮಾಡಿದ್ದಾರೆ.