ಸತತ ಪರಿಶ್ರಮದಿಂದ ಗೆಲವು ಸಾಧ್ಯ : ಡಾ. ವೀಣಾ ಬಿರಾದಾರ
ಧಾರವಾಡ 21: ಆರೋಗ್ಯವೇ ಭಾಗ್ಯ ಎನ್ನುವಂತೆ ಮಾನಸಿಕ ಆರೋಗ್ಯದಂತೆ ದೈಹಿಕ ಆರೋಗ್ಯವು ಬಹಳ ಮುಖ್ಯವಾಗಿದೆ. ಕತ್ತಲಿನಿಂದ ಬೆಳಕಿನ ಕಡೆಗೆ ನಮ್ಮನ್ನು ಕರೆದೊಯ್ಯುವ ಕಣ್ಣು ದೇಹದ ಭಾಗಗಳಲ್ಲಿ ಮುಖ್ಯವಾದುದು. ವಿದ್ಯಾರ್ಥಿಗಳು ಸ್ಪಷ್ಟ ಗುರಿಯನ್ನಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಿದಾಗ ಯಶಸ್ಸು ಸುಲಭವಾಗಿ ದೊರೆಯುತ್ತದೆ ಎಂದು, ಶ್ರೀ ಸಾಯಿ ಕಾಲೇಜಿನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವೀಣಾ ಬಿರಾದಾರ ಇವರು ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಧಾರವಾಡ, ಹೊಂಬೆಳಕು ಪ್ರತಿಷ್ಠಾನ ಧಾರವಾಡ, ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಧಾರವಾಡ ಮತ್ತು ಶ್ರೀ ಸಂಗಮೇಶ್ವರ ಪ್ರೌಡಶಾಲೆ ಜೋಡಳ್ಳಿ ಇವರ ಸಹಯೋಗದೊಂದಿಗೆ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಚಿತ್ರಕಲಾ ಹಾಗೂ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಒಂಭತ್ತು ಮತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾದ ವೈ.ಎನ್. ಪಾಟೀಲ ಇವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಹೆಚ್ಚು ಉಪಯೋಗವಾಗುತ್ತದೆ. ಡಾ. ವೀಣಾ ಬಿರಾದಾರ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅಂತವರ ಮಾರ್ಗದರ್ಶನ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಸಾಧಿಸಲು ಸಹಕಾರಿಯಾಗುವುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮೀರ ಆಚಾರ್ ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು, ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಶೇಖಪ್ಪ ಬಂದೆವ್ವನ್ನವರ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಹರೀಶ್ ಮುಂಜಿ, ವೈದ್ಯರು ಮತ್ತು ಸಿಬ್ಬಂದಿ ವರ್ಗ, ಮೌನೇಶ ಬಡಿಗೇರ, ಆಕಾಶ ಹಿಪ್ಪರಗಿ, ಗ್ರಾಮದ ಹಿರಿಯರು ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಫ್ರೀನ್ ಕುಂಬಾರ ನಿರೂಪಿಸಿದರು, ಪಾರ್ಥಕೋಟಿ ಸ್ವಾಗತಿಸಿದರು, ತೇಜಸ್ವಿನಿ ಕೆ. ವಂದಿಸಿದರು.