ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಆರೋಪಿ ವೈಭವ್ ಜೈನ್ ಬಂಧನ
ಬೆಂಗಳೂರು, ಸೆಪ್ಟೆಂಬರ್ 12: ಸ್ಯಾಂಡಲ್ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ ಮತ್ತೋರ್ವ ಆರೋಪಿ ವೈಭವ್ ಜೈನ್ ನನ್ನು ಬಂಧಿಸಲಾಗಿದೆ.
ಪ್ರಕರಣದಲ್ಲಿ ಆರೋಪಿ ವೈಭವ್ ಜೈನ್ 5ನೇ ಆರೋಪಿಯಾಗಿದ್ದು, ರಾಗಿಣಿ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಹೇಳಿಕೆಯನ್ನು ಆಧರಿಸಿ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನಟಿಯರಾದ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಬಂಧನದ ನಂತರ ಕೊರೋನಾ ಇದೆ, ನಾನು ಕ್ವಾರಂಟೈನ್‌ನಲ್ಲಿದ್ದೇನೆ ಎಂದು ಹೇಳುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ವೈಭವ್ ಕ್ವಾರಂಟೈನ್ ಮುಗಿಯುತ್ತಿದ್ದಂತೆ ನಾಪತ್ತೆಯಾಗಿದ್ದ.
ಬೆಂಗಳೂರಿನ ಚಿನ್ನದ ವ್ಯಾಪಾರಿಯ ಮಗನಾಗಿರುವ ವೈಭವ್ ಜೈನ್ ಈಗ ಖುದ್ದು ತಾನೇ ಚಿನ್ನದ ಬ್ಯುಸಿನೆಸ್ ಮಾಡುತ್ತಿದ್ದಾನೆ. 2018ರಲ್ಲಿ ರವಿಶಂಕರ್ ಹಾಗೂ ರಾಗಿಣಿ ಪ್ರತಿಷ್ಟಿತ ಹೋಟೆಲ್ನಲ್ಲಿ ಪಾರ್ಟಿಗೆ ಹೋಗಿದ್ದರು. ಈ ವೇಳೆ ರವಿಶಂಕರ್ಗೆ ವೈಭವ್ ಜೈನ್ ಪರಿಚಯವಾಗಿದ್ದ. ಸ್ನೇಹ ಸಲುಗೆ ಜಾಸ್ತಿ ಆಗುತ್ತಾ ಹೋದಂತೆ ಅವನ ವ್ಯವಹಾರ ರವಿಶಂಕರ್ಗೆ ಗೊತ್ತಾಗಿತ್ತು. ವೈಭವ್ ಜೈನ್ ಸ್ನೇಹಿತರಾದ ಅರುಣ್, ವಿನಯ್, ಪ್ರಶಾಂತ್ ರಂಕ ಮೂಲಕ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ
ಪ್ರತಿಷ್ಠಿತ ಹೊಟೇಲ್ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ಸ್ ದಂಧೆ ಮಾಡುತ್ತಿದ್ದ ವೈಭವ್ ಜೈನ್ ಪಾರ್ಟಿಗೆ ನಗರದ ದೊಡ್ಡ ಶ್ರೀಮಂತರು ಬರುತ್ತಿದ್ದರು. ಅವರಿಗೆ ವೈಭವ್ ಮಾದಕ ಪದಾರ್ಥಗಳನ್ನು ಪೂರೈಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.