ಸೆ.3ರಂದು ವೀರಭದ್ರದೇವರ ಜಯಂತಿ: ರಾಯಚೋಟಿಯಲ್ಲಿ ಪುಸ್ತಕ ಲೋಕಾರ್ಪಣೆ
ಹುಬ್ಬಳ್ಳಿ 01: ಭಾದ್ರಪದ ಮಾಸದ ಮೊದಲನೇ ಮಂಗಳವಾರ ಸೆ.3ರಂದು ರಾಷ್ಟ್ರದೆಲ್ಲೆಡೆ ಏಕಕಾಲಕ್ಕೆ ನಡೆಯಲಿರುವ ವೀರಭದ್ರ ದೇವರ ಜಯಂತಿ ಸಂದರ್ಭದಲ್ಲಿ ಆಂಧ್ರ್ರದೇಶ ರಾಜ್ಯದ ರಾಯಚೋಟಿಯ ವೀರಭದ್ರದೇವರ ದೇವಾಲಯದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಡಾ. ಜ.ಚ.ನಿ. ಅವರು ಬರೆದಿರುವ ವಿಶ್ವಜ್ಯೋತಿ ವೀರಭದ್ರ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
ಮಂಗಳವಾರ ಪ್ರಾತಃಕಾಲದಲ್ಲಿ ರಾಯಚೋಟಿಯ ವೀರಭದ್ರ ದೇವರಿಗೆ ಏಕಾದಶ ಮಾಹಾರುದ್ರಾಭಿಷೇಕ, ಶಿವಾಷ್ಟೋತ್ತರ, ವಿಶೇಷ ಅಲಂಕಾರ, ಮಹಾಮಂಗಳಾರತಿಯ ಪೂಜಾ ಕೈಂಕರ್ಯಗಳು ನಡೆಯಲಿವೆ. ನಂತರ ನಡೆಯುವ ಜಯಂತಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರ್ಗಿ, ನಗರದಲ್ಲಿರುವ ರಾಯಚೋಟಿ ಕ್ಷೇತ್ರದ ವೀರಭದ್ರ ದೇವರ ತೇರು ಬಳಗದ ಗೀರೀಶಕುಮಾರ ಬುಡರಕಟ್ಟಿಮಠ, ಪಿ.ಎಂ.ಚಿಕ್ಕಮಠ, ರಮೇಶ ಉಳ್ಳಾಗಡ್ಡಿ, ಪ್ರಕಾಶ ಅಂದಾನಿಮಠ, ರಾಚಯ್ಯ ಮಠಪತಿ, ಎಂ.ಐ.ದೇಶನೂರ, ಶಿವಾನಂದ ನಾಗಠಾಣ ಇತರರು ಪಾಲ್ಗೊಳ್ಳುವರು.
ನವನಗರದಲ್ಲಿ : ನವನಗರದ ವೀರಶೈವ ಸಮಾಜ ಸೇವಾ ಸಂಘಟನಾ ಸಮಿತಿ ಹಾಗೂ ವೀರಭದ್ರೇಶ್ವರ ಸೇವಾ ಬಳಗದ ಜಂಟಿ ಆಶ್ರಯದಲ್ಲಿ ಸೆ.3 ರಂದು ನವನಗರದ ವೀರಭದ್ರ ದೇವರ ದೇವಾಲಯದಲ್ಲಿ ಸಂಜೆ 4 ಗಂಟೆಗೆ ಶ್ರೀವೀರಭದ್ರೇಶ್ವರ ಜಯಂತಿ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಮಂಗಳವಾರ ಪ್ರಾತಃಕಾಲದಲ್ಲಿ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆಯ ವಿಶೇಷ ಪೂಜೆ ನಡೆಯಲಿದೆ. ಸಂಜೆ ಉಡಿತುಂಬುವ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಲಿವೆ ಎಂದು ಅಧ್ಯಕ್ಷ ಅನಿಲಕುಮಾರ ಉಳ್ಳಾಗಡ್ಡಿ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.