ಕಾಗವಾಡ

ಸುಮಂಗಲೆಯರು ಶ್ರದ್ಧಾಭಕ್ತಿಯಿಂದ ವಟಸಾವಿತ್ರಿ ವೃತ ಆಚರಣೆ

ಸುಮಂಗಲೆಯರು ಶ್ರದ್ಧಾಭಕ್ತಿಯಿಂದ ವಟಸಾವಿತ್ರಿ ವೃತ ಆಚರಣೆ

ಶೇಡಬಾಳ 14: ಕಾಗವಾಡ ತಾಲೂಕಿನಾದ್ಯಂತ ಕಾರಹುಣ್ಣಿಮೆಯ ದಿನದಂದು ಸುಮಂಗಲೆಯರು ಅಶ್ವಥ್ ಮರಕ್ಕೆ (ಆಲದ ಮರ) ವಿಶೇಷ ಪೂಜೆ ಸಲ್ಲಿಸುವದರ ಮೂಲಕ ವಟಸಾವಿತ್ರಿ ವೃತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. 

ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ವಟಸಾವಿತ್ರಿ ಹಬ್ಬವನ್ನು ಗ್ರಾಮೀಣ ಭಾಗದ ಮಹಿಳೆಯರು ಅತ್ಯಂತ ಭಕ್ತಿ ಭಾವದಿಂದ ಆಚರಿಸುತ್ತಾ ಬಂದಿದ್ದಾರೆ.  

ಮಹಾಸತಿ ಸಾವಿತ್ರಿಯು ತನ್ನ ಗಂಡ ಸತ್ಯಾವಾನ ಮರ ಕಡಿಯುವ ವೇಳೆ ಮರಣ ಹೊಂದಿದಾಗ ಯಮನೊಂದಿಗೆ ವಾದ ಮಾಡಿ ವರ ಪಡೆದು ತನ್ನ ಗಂಡನ ಪ್ರಾಣವನ್ನು ಪಡೆದಿದ್ದಳು ಎಂದು ಪ್ರತೀತಿ ಇದೆ. 

ಅಂದಿನಿಂದ ಸುಮಂಗಲೆಯರು ವಟಸಾವಿತ್ರಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ತಮ್ಮ ಗಂಡನ ಆರೋಗ್ಯ, ಆಯುಷ್ಯ ಚೆನ್ನಾಗಿದ್ದು, ತಮ್ಮ ಸೌಭಾಗ್ಯ ಯಾವತ್ತೂ ಹೀಗೆ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಅಶ್ವಥ್ ಮರಕ್ಕೆ ಏಳು ಸುತ್ತು ದಾರ ಸುತ್ತಿ ಏಳೇಳು ಜನ್ಮಕ್ಕೂ ಇವರೇ ನನ್ನ ಪತಿಯಾಗಿರಲಿ, ತಮ್ಮ ಕುಟುಂಬ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ಸಾಗಲಿ ಎಂದು ಬೇಡಿಕೊಳ್ಳುತ್ತಾರೆ.  

ಪ್ರತಿ ವರ್ಷ ಕಾರಹುಣ್ಣಿಮೆಯ ದಿನದಂದು ಈ ವೃತವನ್ನು ಆಚರಣೆ ಮಾಡಲಾಗುತ್ತಿದ್ದು, ಎಲೆ, ಅಡಿಕೆ, 5 ವಿಧವಾದ ಹಣ್ಣುಗಳು, ಮುತ್ತೈದೆಯರಿಗೆ ಉಡಿ ತುಂಬುವ ಪದ್ದತಿಯು ಈ ವೃತದಲ್ಲಿದೆ.  

ಅದರಂತೆ ಕಾಗವಾಡ ತಾಲೂಕಿನ ಪ್ರತಿ ಗ್ರಾಮಗಳಲ್ಲಿಯು ಸುಮಂಗಲೆಯರು ಆಲದ ಮರಕ್ಕೆ ದಾರ ಸುತ್ತಿ ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು. 

ಗೀತಾ ಸೋನಾರ, ಸಾವಿತ್ರಿ ಕಾಶೀದ, ಅನಿತಾ ಗಾವಡೆ, ಕಾವ್ಯ ಸೋನಾರ, ಶಿಲ್ಪಾ ಶಿರಸಂಗಿ, ಅನಿತಾ ಬೋಸಲೆ, ಅನ್ನಪೂರ್ಣಾ ಬೋಸಲೆ, ವಿನೂತಾ ಸೋನಾರ ಸೇರಿದಂತೆ ಅನೇಕ ಸುಮಂಗಲೆಯರು ಇದ್ದರು. 


ಸುದ್ದಿ ಓದಿ