ನೀರಿನ ಅವೈಜ್ಞಾನಿಕ ಬಳಕೆಯಿಂದ ಭವಿಷ್ಯದಲ್ಲಿ ಆತಂಕ ಸೃಷ್ಠಿಯಾಗಲಿದೆ : ಡಾ.ಎಸ್.ಎಸ್. ಅಂಗಡಿ
ಧಾರವಾಡ 09: ನೀರು ಸಮಸ್ತ ಜೀವಿಗಳ ಜೀವಾಳ. ಭಾರತದಲ್ಲಿ ನೀರಿನ ಅವೈಜ್ಞಾನಿಕ ಬಳಕೆಯಿಂದ ಭವಿಷ್ಯದಲ್ಲಿ ಆತಂಕ ಸೃಷ್ಠಿಯಾಗಲಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎಸ್.ಎಸ್. ಅಂಗಡಿ ಅಭಿಪ್ರಾಯ ಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ.ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ‘ಕೃಷಿಯಲ್ಲಿ ನೀರಿನ ಸದ್ಬಳಕೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಮುಂದುವರೆದು, ಭಾರತದಲ್ಲಿ ನೀರಿನ ವೈಜ್ಞಾನಿಕ ಬಳಕೆ ಸಾಕಷ್ಟು ಸಮರ್ಕವಾಗಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ದುರ್ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಬೆಳೆ ಹಾನಿಯಾಗುತ್ತಿದೆ. ಭೂಮಿ ಜವುಳಾಗಿ ಮಣ್ಣಿನ ಸವೆತ ಉಂಟಾಗುತ್ತಿದೆ. ನೀರಿನ ಸದ್ಬಳಕೆಗಾಗಿ ರೈತರುತಾವು ಸಾಗುವಳಿ ಮಾಡುತ್ತಿರುವ ಜಮೀನಿನ ಸುತ್ತಲೂ ನೀರು ಬಸಿದು ಹೋಗಲು ಕಂದಕಗಳ ನಿರ್ಮಾಣ ಮಾಡಬೇಕು. ಹೊಲಗಳಲ್ಲಿ ಮಣ್ಣು ಸವೆತವನ್ನು ತಡೆಯಲು ಬದುಗಳ ನಿರ್ಮಾಣ ಹಾಗೂ ಕೆರೆಗಳ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ನೀರಿನ ಸಮರ್ಕ ಬಳಕೆಗೆ ಜನ ಜಾಗೃತಿ ಅಗತ್ಯವಾಗಿದೆ.
ರೈತರು ನೀರಿನ ದುಂದುವೆಚ್ಚ ಮಾಡದೇ ಬೆಳೆ ಪದ್ಧತಿ ಅನುಸರಿಸಿ, ಬೆಳೆಯ ಲಕ್ಷಣಗಳನ್ನು ಗುರ್ತಿಸಿ ನೀರನ್ನು ದುರ್ಬಳಕೆಯಾಗದಂತೆ ಹಿತಮಿತವಾಗಿ ಉಪಯೋಗಿಸಬೇಕು. ಭಾರತದಲ್ಲಿ ‘ಸಮಗ್ರ ಕೃಷಿ ಪದ್ಧತಿ’ ಅನುಸರಿಸಿ ರೈತರು ಕಡಿಮೆ ಖರ್ಚಿನಲ್ಲಿ ಆದಾಯ ದ್ವಿಗುಣವಾಗುವಂತೆ ಯೋಜನಾಬದ್ಧ ಕೃಷಿ ಪದ್ಧತಿ ಅನುಸರಿಸಬೇಕು. ನೈಸರ್ಗಿಕ ಸಂಪನ್ಮೂಲ ಸದ್ಬಳಕೆಯೊಂದಿಗೆ ಪರಿಸರಕ್ಕೆ ಪೂರಕವಾದ ಸುಸ್ಥಿರ ಕೃಷಿ ಪದ್ಧತಿ ಅಗತ್ಯ ಎಂದು ಹೇಳಿದರು. ದತ್ತಿದಾನಿ ಈಶ್ವರಚಂದ್ರ ಹೊಸಮನಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಾಹಿತ್ಯದಜೊತೆಗೆ ಕೃಷಿ ಬಗ್ಗೆ ಚಿಂತನ-ಮಂಥನಗಳು ನಡೆಯಲೆಂದು ದತ್ತಿ ಇರಿಸಲಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ರಾದಚಂದ್ರಕಾಂತ ಬೆಲ್ಲದ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶ. ಕೃಷಿ ಭಾರತದ ಬೆನ್ನೆಲುಬು. ಧಾರವಾಡದ ಕೃಷಿ ವಿಶ್ವವಿದ್ಯಾಲಯ ದೇಶದ ಮಾದರಿ ಕೃಷಿ ವಿಶ್ವವಿದ್ಯಾಲಯವಾಗಿದೆ. ಕೃಷಿ ಮೇಳದ ಮೂಲಕ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ ಎಂದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಶ್ರೀಶೈಲ ಹುದ್ದಾರ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು. ಶಿವಾನಂದ ಭಾವಿಕಟ್ಟಿ, ಬಿ.ಡಿ. ಪಾಟೀಲ, ಎಂ.ಡಿ.ಪಾಟೀಲ, ಡಾ.ಯರಗಟ್ಟಿ, ಸಿದ್ಧಣ್ಣ ಕಂಬಾರ, ಚಂದ್ರಗೌಡ ಭೂಮನಗೌಡ್ರ, ವೀರಭದ್ರಗೌಡ ಪಾಟೀಲ, ಪ್ರಕಾಶಜಕಾತಿ.ರಾಜೇಂದ್ರ ಸಾವಳಗಿ, ಎಸ್.ಕೆ. ಕುಂದರಗಿ, ಪ್ರಕಾಶ ಧರಣೆಪ್ಪ ಗೌಡರ, ಎನ್.ಜಿ. ರಸಾಳಕರ ಸೇರಿದಂತೆ ಹೊಸಮನಿ ಪರಿವಾರದವರು ಇದ್ದರು.