ಅಗ್ನಿಪಥದಿಂದ ನಿರುದ್ಯೋಗ ಸಮಸ್ಯೆ ಹೆಚ್ಚಲಿದೆ: ಮಂಗಸೂಳಿ
ಅಥಣಿ 28: ಕೇಂದ್ರದ ಅಗ್ನಿಪಥ ಯೋಜನೆ ಮುಂದಿನ ನಾಲ್ಕು ವರ್ಷಗಳಲ್ಲಿ ವ್ಯಾಪಕವಾಗಿ ನಿರುದ್ಯೋಗ ಸಮಸ್ಯೆ ಉಂಟಾಗಿ ದೇಶದಲ್ಲಿ ಹಾಹಾಕಾರ ಉಂಟಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು.
ಅವರು ಕಾಂಗ್ರೆಸ್ ಪಕ್ಷದ ಅಥಣಿ ಹಾಗೂ ತೆಲಸಂಗ ಬ್ಲಾಕ್ ಆಶ್ರಯದಲ್ಲಿ ಸ್ಥಳೀಯ ಮಿನಿ ವಿಧಾನ ಸೌಧ ಆವರಣದಲ್ಲಿ ಅಗ್ನಿಪಥ ಯೋಜನೆ ವಿರೋಧಿಸಿ ಆಯೋಜಿಸಿದ್ದ ಸತ್ಯಾಗೃಹದ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.
ಯುವಕರಿಗೆ ಕೇವಲ 4 ವರ್ಷಗಳವರೆಗೆ ಉದ್ಯೋಗದಲ್ಲಿಟ್ಟುಕೊಂಡು ಮುಂದೆ ಸ್ವಲ್ಪ ಹಣ ಕೊಟ್ಟು ಅವರನ್ನು ಹೊರಗೆ ಹಾಕುವುದೇ ಅಗ್ನಿಪಥ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಿಂದ ಉದ್ಯೋಗ ಕಳೆದುಕೊಳ್ಳುವ ಯುವಕರು ಉದ್ಯೋಗದ ಜೊತೆಗೆ ತಮ್ಮ ಅರ್ಹತೆಯ ವಯಸ್ಸನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಂದರು. ಪ್ರಾರಂಭದಿಂದಲೂ ಕಾಂಗ್ರೆಸ್ ಪಕ್ಷ ಕೇಂದ್ರದ ಅಗ್ನಿಪಥ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದ್ದು, ಇಡೀ ದೇಶದಲ್ಲಿ ಶಾಂತವಾಗಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸಲಾಗುತ್ತಿದೆ ಎಂದ ಅವರು ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೂ ಒಂದು ಲಕ್ಷದಷ್ಟು ಉದ್ಯೋಗವನ್ನೂ ಕೂಡ ಸೃಷ್ಟಿಸಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಗೆ ಹೆದರಿ ಪ್ರಧಾನಿ ನರೇಂದ್ರ ಮೋದಿಯವರು ವಿವಾದಿತ ಕೃಷಿ ಕಾನೂನುಗಳನ್ನು ಹಿಂದೆ ಪಡೆದಂತೆ ಅಗ್ನಿಪಥ ಯೋಜನೆಯನ್ನೂ ಸಹ ಕಾಂಗ್ರೆಸ್ ಪಕ್ಷದ ಪ್ರತಿಭಟನೆಗೆ ಹೆದರಿ ಅಗ್ನಿಪಥ ಯೋಜನೆಯನ್ನು ಹಿಂದೆ ಪಡೆಯುವುದು ನಿಶ್ಚಿತ ಎಂದ ಅವರು ಇಡೀ ದೇಶದಲ್ಲಿ ಕಾಂಗ್ರೆಸ್ ಈ ಯೋಜನೆ ವಿರೋಧಿಸಿ ಶಾಂತಿಯುವ ಹೋರಾಟ ಪ್ರಾರಂಭಿಸಿದೆ ಎಂದರು.
ಸತ್ಯಾಗ್ರಹದಲ್ಲಿ ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಧುರೀಣರಾದ ಸುರೇಶ ಪಾಟೀಲ, ಶಿವು ಗುಡ್ಡಾಪುರ ಸೇರಿದಂತೆ ಅನೇಕರು ಮಾತನಾಡಿದರು. ಧುರೀಣರಾದ ಎಸ್.ಕೆ.ಬುಟಾಳಿ, ಬಸವರಾಜ ಬುಟಾಳಿ, ಸತ್ಯಪ್ಪಾ ಬಾಗೆನ್ನವರ, ಸೈಯ್ಯದಮೀನ್ ಗದ್ಯಾಳ, ಸೈಯ್ಯದ ಗದ್ಯಾಳ, ಸುನೀಲ ಸಂಕ, ಸಂಜು ಕಾಂಬಳೆ, ಸುನೀತಾ ಐಹೊಳೆ, ಕಲಾವತಿ ಕಿತ್ತೂರ, ರೇಖಾ ಪುಂಜಪ್ಪಗೋಳ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.