ಇಂಡಿ

ಕ್ಷಯ ರೋಗದ ಅರಿವು ಕಾರ್ಯಕ್ರಮ /..

ಕ್ಷಯ ರೋಗದ ಅರಿವು ಕಾರ್ಯಕ್ರಮ /..

ಇಂಡಿ: ಪ್ರಸ್ತುತ ಜಗತ್ತಿನಲ್ಲಿ ಕ್ಷಯರೋಗವು ಮಾರಕವಾಗಿ ಪರಿಣಮಿಸಿದ್ದು ಇದನ್ನು ನಿಯಂತ್ರಿಸುವ ಬಗ್ಗೆ ಜನರು ಜಾಗೃತರಾಗಬೇಕು. ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು. 

ಸೋಮವಾರ ತಾಲೂಕಿನ ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಕ್ಷಯ ರೋಗದ ಅರಿವು ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಕ್ಷಯರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಕ್ಷಯರೋಗದ ಲಕ್ಷಣ, ಹರಡುವ ವಿಧಾನ, ಚಿಕಿತ್ಸೆ ಹಾಗೂ ರೋಗ ನಿಯಂತ್ರಣದ ಕುರಿತು ಸಂಪೂರ್ಣ ಮಾಹಿತಿ ನೀಡಿದರು. 

ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಪ್ರಕಾಶ ವಾಘಮೋರೆ ಕ್ಷಯರೋಗ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಕ್ರೀಯ ಕ್ಷಯರೋಗ ಕಂಡು ಹಿಡಿಯುವದು 2 ವಾರಕ್ಕಿಂತ ಹೆಚ್ಚಿನ ಅವಧಿಯ ವೇಳೆ ಕಫ್‌ದ ಜೊತೆ ರಕ್ತ ಕಾಣಿಸುವದು ವಿಶೇಷವಾಗಿ ರಾತ್ರೀಯ ವೇಳೆ ಜ್ವರ, ತೂಕ ಕಡಿಮೆಯಾಗುವದು, ರಾತ್ರಿ ವೇಳೆ ಬೆವರುವದು ಹಸಿವಾಗದಿರುವದು ಇವು ಕ್ಷಯರೋಗದ ಲಕ್ಷಣಗಳಾಗಿವೆ. ಕ್ಷಯರೋಗದ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುತ್ತದೆ ಎಂದರು. 

15 ದಿನಗಳವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ‌್ಯಕರ್ತೆಯರು ತಾಲೂಕಿನಾದ್ಯಂತ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆ ಕೇಂದ್ರಗಳಲ್ಲಿ ವ್ಯಕ್ತಿಗಳ ಕಫ ಪರೀಕ್ಷೆ ನಡೆಸಿ ಉಚಿತ ಚಿಕಿತ್ಸೆ ನೀಡುವ ಅಭಿಯಾನ ನಡೆಯಲಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.  

ಡಾ. ಸೀಮಾ ಅಮ್ರಾನ್‌ಬಾನು, ಚಿದಾನಂದ ಅರಗೆ, ಅಂಬಾದಾಸ ವಾಘಮೋಡೆ, ಜುಲೇಖಾ ಪಟೇಲ್, ಭಾರತಿ ತೊನಶಾಳ್, ಪ್ರವೀಣ ಧುಮ್ಮಾ, ಚಂದ್ರಾಮ ಮೇಡೆದಾರ, ಸಾವಿತ್ರಿ ಅರಕೇರಿ, ಸದಾಶಿವ ಬಡಿಗೇರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ