ಭಕ್ತಿಗೆ ಮಾರು ಹೋಗಿ ಕೂಲಿ ಮಾಡಿಟ್ಟ ಹಣ ದೇವಸ್ಥಾನದ ಅಭಿವೃದ್ಧಿಗೆ ಅರ್ಪಣೆ
ರಾಣೇಬೆನ್ನೂರ :9 ಭಕ್ತಿಯ ಸ್ವರೂಪಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ, ಆಸ್ತಿಕ, ಶ್ರೀಮಂತರು ದೇವಸ್ಥಾನಗಳಿಗೆ ಲಕ್ಷ ಲಕ್ಷ ಕೊಟ್ಟು ತಮ್ಮ ಹೆಸರು ಕೆತ್ತಿಸುತ್ತಾರೆ, ಆದರೆ ಬಡ ಕೂಲಿಕಾರರು ತಾವು ಬೆವರು ಸುರಿಸಿ ದುಡಿದ ದಿನಗೂಲಿಯಲ್ಲಿ ಜೀವನ ನಡೆಸುದೇ ಕಷ್ಟ ಅಂತದರಲ್ಲಿ ಅವರಿಗಿರುವ ಎಲ್ಲಾ ತಾಪತ್ರೆಯಗಳನ್ನು ಬದಿಗೊತ್ತಿ ದೇವಸ್ಥಾನಗಳಿಗೆ, ಮಠಮಾನ್ಯಗಳಿಗೆ ತಾವು ಕೂಲಿ ಮಾಡಿ ಬಂದ ಹಣದಲ್ಲಿಯೇ ಒಂದು ಪಾಲು ದೇವರಿಗೆ ನೀಡಿ ಕೃತಾರ್ಥರಾಗುತ್ತಾರಲ್ಲಾ ಅದು ನಿಜವಾದ ಭಕ್ತಿಯಂದು ರೈತ ಮುಖಂಡ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು.
ಅವರು ನಿನ್ನೆ ಸಂಜೆ ಹೊಸ ಮುಷ್ಟೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ತ್ರಿವೇಣಿ ಸಂಗಮ ದೇವಸ್ಥಾನದ ಜೀರ್ಣೋದ್ಧರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಗ್ರಾಮದ ಬಡ ಕೂಲಿಕಾರರಾದ ಶ್ರೀಮತಿ ಇಂದ್ರವ್ವ ಕೋಂ. ನಾಗಪ್ಪ ಮುಷ್ಟೂರನಾಯ್ಕರ ರವರು ಸಭೆಯ ಮಧ್ಯ ಬಂದು ಕಳೆದ 10 ವರ್ಷಗಳಿಂದ ತಾವು ಕೂಲಿ ಮಾಡಿ ಕೂಡಿಟ್ಟಿದ್ದ ಚಿಲ್ಲರೆ ಕಾಸಿನ ಸುಮಾರು 20 ಕೆ.ಜಿ. ಭಾರದ ತುಂಬಿದ ಡಬ್ಬಿಗಡಿಗೆಯನ್ನು ತಂದು ದೇವಸ್ಥಾನದ ಕಟ್ಟಡ ಮತ್ತು ಇತರೆ ಕಾಮಗಾರಿಗಳ ಬಳಕೆಗೆ ಒಪ್ಪಿಸಿದ್ದು ನೆರೆದ ಭಕ್ತರೆಲ್ಲರನ್ನೂ ದಿಗ್ಭ್ರಮೆಗೊಳಿಸಿದ ಘಟನೆಯನ್ನು ಕುರಿತು ಮಾತನಾಡಿದ ಅವರು ಈ ಕುಟುಂಬದ ಮುಖ್ಯಸ್ಥ ನಾಗಪ್ಪನಿಗೆ ಕಣ್ಣು ಕಾಣುವುದಿಲ್ಲ, ಪತ್ನಿ ಇಂದ್ರಮ್ಮ ದಿನನಿತ್ಯ ಕೂಲಿ ಕೆಲಸ ಮಾಡುತ್ತಾಳೆ. ಇವರು ಸುಮಾರು 10 ವರ್ಷಗಳಿಂದ ಕೂಲಿನಾಲಿ ಮಾಡಿ ಬೆವರು ಸುರಿಸಿ ತಮ್ಮ ಮನೆಯಲ್ಲಿ ಕೂಡಿಟ್ಟ ಸುಮಾರು 20 ಕೆ.ಜಿ. ಭಾರದ ಬಿಡಿಗಾಸು ಚಿಲ್ಲರೆ ತುಂಬಿದ ಡಬ್ಬಿಗಡಿಗೆಯನ್ನು ದೇವಸ್ಥಾನದ ಅಭಿವೃದ್ಧಿಗೆ ಸಲ್ಲಿಸಿದ ಭಕ್ತಿಯ ಸೇವೆಗೆ ಬೆಲೆಕಟ್ಟಲಾಗದು ಇದು ನಿಜವಾದ ಬಡವರ ಭಕ್ತಿಯ ಪರಾಕಾಷ್ಟೇ ಎಂದರು.
ಕೆಲವು ದಿನಗಳ ಹಿಂದೆ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ನೂತನ ರಥಕ್ಕೆ ಮಧ್ಯಮ ವರ್ಗದ ರೈತನೋರ್ವ 15 ಲಕ್ಷ ರೂ. ದೇಣಿಗೆ ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಪಾಟೀಲರು ದಾನ, ಧರ್ಮ, ದೇವರ ಸೇವೆ ಆಸ್ತಿಕರಿಂದ ಮಾತ್ರ ಸಾಧ್ಯ. ಕಳೆದ ಮೂರು ವರ್ಷಗಳ ಹಿಂದೆ ಕೊರೊನಾ ಹೆಮ್ಮಾರಿ ಆವರಿಸಿದ ಸಂದರ್ಭವನ್ನು ಜನರು ಈಗ ಮರೆತು ಮತ್ತೆ ದುರಾಸೆಗೆ ಬಿದ್ದಿರುವುದು ಮನುಷ್ಯನ ಸ್ವಾರ್ಥತೆ ಮತ್ತು ಆಸೆಗಳಿಗೆ ಮಿತಿ ಇಲ್ಲಾ ಎಂಬುದನ್ನು ಎತ್ತಿ ತೋರಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ದಿಳ್ಳೆಪ್ಪ ಗೆಂದಣ್ಣನವರ, ಪುಟ್ಟಪ್ಪ ಬಣಕಾರ, ಅಕ್ಬರ್ಸಾಬ ಶೇತಸನದಿ, ದೊಣ್ಣೆಪ್ಪ ಅಜ್ಜೇರ, ಅರುಣ ಯಲ್ಲಕ್ಕನವರ, ನಿಂಗರೆಡ್ಡಿ ಬಳ್ಳಾರಿ, ಶಾಂತಮ್ಮ ಹಿರೇಮರದ, ನಗೀನಾ ಬಾನು ಶೇತಸನದಿ, ಚೌಡವ್ವ ಮುಷ್ಟೂರನಾಯ್ಕ, ಬಸನರಡ್ಡಿ ಬಳ್ಳಾರಿ, ಹರಿಹರಗೌಡ ಪಾಟೀಲ, ಮಲ್ಲಪ್ಪ ಲಿಂಗದಹಳ್ಳಿ ಮುಂತಾದ ನೂರಾರು ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.