ರಾಣೆಬೆನ್ನೂರ

ಮೈಸೂರು ದಸರಾ ನೆನಪಿಸಿದ ತ್ರಿವೇಣಿ ಸಂಗಮ: ಅದ್ದೂರಿ ದಸರಾ ಮಹೋತ್ಸವ

ಮೈಸೂರು ದಸರಾ ನೆನಪಿಸಿದ ತ್ರಿವೇಣಿ ಸಂಗಮ: ಅದ್ದೂರಿ ದಸರಾ ಮಹೋತ್ಸವ

ರಾಣೇಬೆನ್ನೂರ 14: ತಾಲೂಕಿನ ಹೊಸ ಮುಷ್ಟೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ತ್ರಿವೇಣಿ ಸಂಗಮ ದೇವಸ್ಥಾನದ ವೀರ ಆಂಜನೇಯ ಸ್ವಾಮಿಯ ಬನ್ನಿ ಮುಡಿಯುವ ಕಾರ್ಯಕ್ರಮ ಅತ್ಯಂತ ಸಡಗರ, ಸಂಭ್ರಮದಿಂದ ನೆರವೇರಿತು. ಹೊಸ ಬೆಳ್ಳಿ ಆಂಜನೇಯನ ಮೆರವಣಿಗೆ ಹೊಸದಾಗಿ ತಂದ ಪಲ್ಲಕ್ಕಿ, ಕುದುರೆ ಪರ್ತಮಲ್ಲಪ್ಪ ಛತ್ರಿ ಚಾಮರಗಳಿಂದ ನೂತನವಾಗಿ ಕಟ್ಟಿಸಿದ ಬನ್ನಿಕಟ್ಟಿಗೆ ವಿಶೇಷ ಪೂಜೆಯೊಂದಿಗೆ ಮಹಿಳೆಯರಾದಿಯಾಗಿ ಆರತಿ ಬಟ್ಟಲು ಮತ್ತು ಸಸಿಗಳ ತಟ್ಟೆಯೊಂದಿಗೆ ಗೊಂಬೆ ಕುಣಿತ, ಬಾಜಾ ಬಜಂತ್ರಿ, ಹಲಗೇ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಮೆರವಣಿಗೆ ನಡೆದಿದ್ದು ಮಕ್ಕಳು, ಪುರುಷರು ಗೊಂಬೆ ದಿರಿಸಿನ ಕಲಾವಿದರೊಂದಿಗೆ ಕುಣಿತಕ್ಕೆ ಹೆಜ್ಜೆ ಹಾಕಿದರು. ಪ್ರಥಮ ಬಾರಿಗೆ ನಡೆದ ಈ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ಗ್ರಾಮದ ದಾಸಪ್ಪನ ಹೊರೆಹೊತ್ತ ಹನುಮಂತಪ್ಪ ಜಾನಪ್ಪನವರ ಸಂಪ್ರದಾಯದಂತೆ ಮೂರು ಬಿಲ್ಲುಗಳನ್ನು ಬನ್ನಿ ಕಟ್ಟಿಗೆಯಿಂದ ಪೂರ್ವದಿಕ್ಕಿಗೆ ಬಿಟ್ಟ ಮೇಲೆ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.  

ಇದಕ್ಕೆ ಮೊದಲು ತ್ರಿವೇಣಿ ಸಂಗಮ ದೇವಸ್ಥಾನದ ಕಳಸಾರೋಹಣ ಮುಗಿದ 48 ದಿನಗಳ ವರೆಗೆ ನಿತ್ಯ ನಿರಂತರವಾಗಿ ನಡೆದ ಪಂಚಾಭಿಷೇಕದ ಕೊನೆಯ ಮಹಾರುದ್ರಾಭಿಷೇಕ ಕಾರ್ಯಕ್ರಮವನ್ನು ರಾಣೇಬೆನ್ನೂರಿನ ಹಿರೇಮಠದ ಶನೇಶ್ವರ ಮಂದಿರದ  ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅನೇಕ ವಿಧಿ ವಿಧಾನಗಳ ಮೂಲಕ ನೆರವೇರಿಸಿಕೊಟ್ಟರು. ಈ ಮಹಾರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಗ್ರಾಮದ ಸರ್ವ ಜನಾಂಗದ ಸುಮಾರು 500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.  

ಸುದ್ದಿ ಓದಿ