ಇಂಡಿ

ಸಮಾಜದಲ್ಲಿ ಹೆಣ್ಣು ಗಂಡು ಮಕ್ಕಳನ್ನು ಸಮಾನತೆಯಿಂದ ಕಾಣಿ: ಅಂಬಲಗಿ

ಸಮಾಜದಲ್ಲಿ ಹೆಣ್ಣು ಗಂಡು ಮಕ್ಕಳನ್ನು ಸಮಾನತೆಯಿಂದ ಕಾಣಿ: ಅಂಬಲಗಿ

ಇಂಡಿ: ಭ್ರೂಣ ಹತ್ಯೆ ಅಪರಾಧವಾಗಿದ್ದು ಯಾವುದೇ ಕಾರಣಕ್ಕೂ ಯಾರೂ ಭ್ರೂಣ ಹತ್ಯೆಯಂತಹ ನೀಚ ಕೃತ್ಯದಲ್ಲಿ ಭಾಗಿಯಾಗದೇ ಸಮಾಜದಲ್ಲಿ ಹೆಣ್ಣು ಗಂಡು ಮಕ್ಕಳನ್ನು ಸಮಾನತೆಯಿಂದ ಕಾಣಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು. 

ಶುಕ್ರವಾರ ತಾಲೂಕಿನ ಬೂದಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಬರುವ ಅಂಗನವಾಡಿಯಲ್ಲಿ “ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಸಾಕಷ್ಟು ತಾತ್ಸಾರ ಮನೋಭಾವ ಇಟ್ಟುಕೊಂಡಿದ್ದಾರೆ. ಹೆಣ್ಣು ಮಕ್ಕಳಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ, ಅದನ್ನು ಬಳಸಿಕೊಳ್ಳಬೇಕು ಹೆಣ್ಣು ಮಕ್ಕಳು ಸಬಲರು ಎಂಬುದರ ಕುರಿತು ಜಾಗೃತಿ ಮೂಡಿಸುವದು ಅಗತ್ಯವಿದೆ. ಈ ನಿಟ್ಟಿನಲ್ಲಿ ಬೇಟಿ ಬಚಾವೋ ಭೇಟಿ ಪಡಾವೋ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಗ್ರಾಮ ಪಂಚಾಯತ ಸದಸ್ಯ ಸೂರುಗೌಡ ಚೌದರಿ ಮಾತನಾಡಿ, ಮಹಿಳೆಯರು ದೇವತೆ ರೂಪದಲ್ಲಿ ಕಂಡ ದೇಶ ನಮ್ಮದು. ಇಂತಹ ದೇಶದಲ್ಲಿ ಹೆಚ್ಚು ಭ್ರೂಣ ಹತ್ಯೆಯಂತಹ ಕೃತ್ಯೆಗಳು ನಡೆಯುತ್ತಿರುವದು ನೋವಿನ ಸಂಗತಿ. ವರದಕ್ಷಿಣೆ ಪಿಡುಗು, ಬಡತನ, ದಾರ್ಮಿಕ ಆಚರಣೆ ಸೇರಿದಂತೆ ವಿವಿಧ ಕಾರಣಗಳಿಂದ ಹೆಣ್ಣು ಮಕ್ಕಳು ಬೇಡ ಎನ್ನುವ ಮನೋಭಾವ ಇದೆ. ಇದು ತಪ್ಪು ಕಲ್ಪನೆ ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಇದನ್ನು ಅರಿತುಕೊಂಡು ಮಹಿಳೆಯರಿಗೆ ಸಮಾಜ ಹೆಚ್ಚು ಅವಕಾಶ ನೀಡಬೇಕು ಎಂದರು. 


ಗ್ರಾಮ ಪಂಚಾಯತಿ ಅಧ್ಯಕ್ಷೆ ಪುತಳಾಬಾಯಿ ಬೀಳೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 

ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆರಾದ ಸುಮಿತ್ರಾ ಲಚ್ಯಾಣ, ಮಂಜುಳಾ ಬಡಿಗೇರ ಸೇರಿದಂತೆ ಅನೇಕ ಕಾರ್ಯಕರ್ತೆಯರು ಇದ್ದರು. 


ಸುದ್ದಿ ಓದಿ