ಕಾಗವಾಡ

ಇಂದಿನ ಮಕ್ಕಳೇ ಭಾವಿ ಪ್ರಜ್ಞಾವಂತ ನಾಗರೀಕರು

ಇಂದಿನ ಮಕ್ಕಳೇ ಭಾವಿ ಪ್ರಜ್ಞಾವಂತ ನಾಗರೀಕರು

ಕಾಗವಾಡ 22:  ಒಂದು ದೇಶವು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿಯ ನಾಗರೀಕರು ವಿದ್ಯಾವಂತರಾಗುವದರ ಜೊತೆಗೆ ಒಳ್ಳೆಯ ಸಂಸ್ಕಾರವಂತ ವ್ಯಕ್ತಿಗಳು ಆಗಿರಬೇಕು. ಇಂದಿನ ಮಕ್ಕಳೇ ಭಾವಿ ಪ್ರಜ್ಞಾವಂತ ನಾಗರೀಕರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರವು ಬಹಳ ಮಹತ್ವದ್ದಾಗಿದ್ದು, ಅದನ್ನು ಪಾಲಕರು ಸರಿಯಾಗಿ ನಿರ್ವಹಿಸಬೇಕಾಗಿದೆಂದು ಪ್ರೊ.ಬಿ.ಎ. ಪಾಟೀಲ ಹೇಳಿದರು. 

ಸೋಮವಾರ ದಿ. 22 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಪಾಲಕ-ಶಿಕ್ಷಕರ ಸಭೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಬಗ್ಗೆ ಪಾಲಕರು ಕಾಳಜಿ ಹೊಂದಬೇಕು. ಮಹಾವಿದ್ಯಾಲಯದಲ್ಲಿ ದಿನನಿತ್ಯ ನಡೆಯುವ ಪಾಠ ಪ್ರವಚನಗಳಲ್ಲಿ ತಮ್ಮ ಮಕ್ಕಳು ಸರಿಯಾಗಿ ತೊಡಗಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಪಾಲಕರು ವಿಚಾರಣೆ ಮಾಡಬೇಕು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್‌.ಎ. ಕರ್ಕಿ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವದರ ಜೊತೆಗೆ ಅವರು ಸರಿಯಾಗಿ ಅಧ್ಯಯನದಲ್ಲಿ ತೊಡಗಿರುವ ಬಗ್ಗೆ ಮೇಲಿಂದ ಮೇಲೆ ದೃಢೀಕರಣ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಡಾ.ಎಸ್‌.ಪಿ. ತಳವಾರ ಪ್ರಾಸ್ತವಿಕವಾಗಿ ಮಾತನಾಡಿದರು. ಮಾರುತಿ ಕನಾಳ ಪಾಲಕರ ಪ್ರತಿನಿಧಿಯಾಗಿ ತಮ್ಮ ಅನಿಸಿಕೆ ಹಂಚಿಕೊಂಡರು. 

ಈ ವೇಳೆ ಪ್ರೊ.ಬಿ.ಡಿ. ಧಾಮಣ್ಣವರ, ಪ್ರೊ. ಎ.ಆರ್‌. ಅಳಗೊಂಡಿ, ಕಾಂಬಳೆ ಹಾಗೂ ತಮ್ಮಣ್ಣಾ ಖವಟಕೊಪ್ಪ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು 120 ಕ್ಕೂ ಹೆಚ್ಚು ಪಾಲಕರು ಉಪಸ್ಥಿತರಿದ್ದರು. ಪ್ರೊ.ಜೆ.ಕೆ. ಪಾಟೀಲ ಸ್ವಾಗತಿಸಿದರು. ಪ್ರೊ.ಎಸ್‌.ಎಸ್‌. ಫಡತರೆ ನಿರೂಪಿಸಿದರು. ಪ್ರೊ.ಎ.ಎ. ಪಾಟೀಲ ವಂದಿಸಿದರು. 


ಸುದ್ದಿ ಓದಿ