ರಾಷ್ಟ್ರೀಯ

ನಾಗಪುರದಲ್ಲಿ ಬೈಕ್‌ಗೆ ಕಂಟೈನರ್ ಟ್ರಕ್ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು

ನಾಗಪುರದಲ್ಲಿ ಬೈಕ್‌ಗೆ ಕಂಟೈನರ್ ಟ್ರಕ್ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು

ನಾಗಪುರ, ಅ. 4 : ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಕಂಟೈನರ್ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶನಿವಾರ ರಾತ್ರಿ ಸುಮಾರು 9.15ರ ವೇಳೆಗೆ ವಾರ್ಧಾ ರಸ್ತೆಯ ಗವಾಸಿ ಮಾನಾಪುರದ ಬಳಿ, ಹಿಂಗ್ಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಪೊಲೀಸರ ಪ್ರಕಾರ, ಯೋಗೇಶ್ ನಾಯಕ್ (35), ಅವರ ಪತ್ನಿ ಸುನಿತಾ ಹಾಗೂ ಇಬ್ಬರು ಪುತ್ರರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಂಟೈನರ್ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ನಾಲ್ವರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಯೋಗೇಶ್, ಸುನಿತಾ ಹಾಗೂ ಅವರ ಕಿರಿಯ ಪುತ್ರ ಗುಲ್ಶನ್ ಅಲಿಯಾಸ್ ಗೋಲು (4) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆರು ವರ್ಷದ ಹಿರಿಯ ಪುತ್ರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಖಾಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ.

ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ಕ್ರಮ ಕೈಗೊಂಡಿದ್ದಾರೆ.

ಸುದ್ದಿ ಓದಿ