ಜಮಖಂಡಿ

ನ. 27ರಿಂದ 29ರವರೆಗೆ ಮೂರು ದಿನಗಳ ಅಧ್ಯಾತ್ಮ ಸಪ್ತಾಹ

ನ. 27ರಿಂದ 29ರವರೆಗೆ ಮೂರು ದಿನಗಳ ಅಧ್ಯಾತ್ಮ ಸಪ್ತಾಹ

ಲೋಕದರ್ಶನ ವರದಿ 

           ಜಮಖಂಡಿ 24 ; ಸಂಗಮೇಶ್ವರ ಮಹಾರಾಜರ 95ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನ. 27ರಿಂದ 29ರವರೆಗೆ ಮೂರು ದಿನಗಳ ಅಧ್ಯಾತ್ಮ ಸಪ್ತಾಹ ಆಯೋಜಿಸಲಾಗಿದೆ ಎಂದು ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು ಹೇಳಿದರು. 

            ನಗರದ ಗಿರಿಮಲ್ಲೇಶ್ವರ ಮಹಾರಾಜರ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಸಂಗಮೇಶ್ವರ ಮಹಾರಾಜರ 95ನೇ ಪುಣ್ಯಸ್ಮರಣೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳ ಮಠಗಳ ಪೂಜ್ಯರು, ಸಂತರು, ದಿಂಡಿ ಹಾಗೂ ಪಲ್ಲಕ್ಕಿ ಪಾದಯಾತ್ರಿಗಳು ಸಪ್ತಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.

           ನ. 27ರಂದು ಬೆಳಗ್ಗೆ 11 ಗಂಟೆಗೆ ಪಾದಯಾತ್ರಿಗಳು ಹಾಗೂ ಭಕ್ತರನ್ನು ಸ್ವಾಗತಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದರು. ವಿದ್ಯಾರ್ಥಿಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿಶೇಷ ಗೋಷ್ಠಿ ಆಯೋಜಿಸಲಾಗಿದೆ. ಭಜನಾ ಮೇಳದ ಜತೆಗೆ ಕೈವಲ್ಯ ದಾಸರ ಭಕ್ತಿಗೀತೆಗಳ ಸ್ಪರ್ಧೆ ನಡೆಯಲಿದೆ.

           ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ 11 ಸಾವಿರ ರೂ, ತೃತೀಯ 8 ಸಾವಿರ ರೂ. ಹಾಗೂ ನಾಲ್ಕನೇ ಬಹುಮಾನ 5 ಸಾವಿರ ರೂ. ನೀಡಲಾಗುವುದು. ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು, ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ವೈಜ್ಞಾನಿಕ ಬೆಲೆ ನಿಗದಿ ಕುರಿತು ರೈತಗೋಷ್ಠಿ ಆಯೋಜಿಸಲಾಗಿದೆ. ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ರೈತರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಚರ್ಚಿಸಲಿದ್ದಾರೆ ಎಂದರು.  

               ನ. 28ರಂದು ಸಂಜೆ 5.30ಕ್ಕೆ ಸರ್ವಧರ್ಮ ಸಮನ್ವಯ ಹಾಗೂ ಏಕತಾ ಭಜನಾ ಸಮಾವೇಶ ನಡೆಯಲಿದ್ದು, ವಿವಿಧ ಮಠಗಳ ಪೂಜ್ಯರು, ಸಂತರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ರಾತ್ರಿ 10ರಿಂದ ಮರುದಿನ ಬೆಳಗಿನವರೆಗೆ ಭಜನೆ, ಕೀರ್ತನೆ, ವಚನ ಗಾಯನ, ನಾಟಕ ಪ್ರದರ್ಶನ ಹಾಗೂ ಜಾಗರಣೆ ನಡೆಯಲಿದೆ.  

            ನ. 29ರಂದು ಬೆಳಗ್ಗೆ 10 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ವಿವಿಧ ಮಠಗಳ ಪೂಜ್ಯರಿಗೆ ಸತ್ಕಾರ ಹಾಗೂ ಧಾರ್ಮಿಕ ಪ್ರವಚನಗಳು ನಡೆಯಲಿವೆ ಎಂದರು. 

ಇದೇ ಸಂದರ್ಭದಲ್ಲಿ ಗುರುಸಿದ್ದಪ್ಪ ಮಹಾರಾಜರು, ಗುರುಲಿಂಗಪ್ಪ ಪಡಸಲಗಿ, ಪ್ರದೀಪ ಮೆಟಗುಡ್ಡ ಮಹಾರಾಜರು, ಸಂಗಪ್ಪ ಬಾಗೇವಾಡಿ ಇದ್ದರು. 


ಸುದ್ದಿ ಓದಿ