ಜಮಖಂಡಿ

ಬಸವಣ್ಣನವರ ಕುರಿತು ಅವಹೇಳನಕಾರಿ ಪದ ಬಳಕೆ ತೀವ್ರ ಖಂಡನೆ

ಬಸವಣ್ಣನವರ ಕುರಿತು ಅವಹೇಳನಕಾರಿ ಪದ ಬಳಕೆ ತೀವ್ರ ಖಂಡನೆ


ಲೋಕದರ್ಶನ ವರದಿ 

          ಜಮಖಂಡಿ: 21: ವಿಶ್ವಗುರು ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ಬರೆದಿರುವ ಬಸವ ಮಂಟಪ ಎಂಬ ಲೇಖನ ಹಾಗೂ ಪುಸ್ತಕದಲ್ಲಿ ಅವಹೇಳನಕಾರಿ ಪದಗಳನ್ನು ಬಳಸಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ ತೀವ್ರವಾಗಿ ಖಂಡಿಸಿದ್ದಾರೆ. 

          ಬಸವಣ್ಣನವರ ಅವರ ವಚನ ಸಾಹಿತ್ಯ ಮತ್ತು ವಚನಕಾರರ ಕುರಿತು ಅವಹೇಳನಕಾರಿ ರೀತಿಯಲ್ಲಿ ಟೀಕೆ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಬಸವಣ್ಣನವರು ಸಮಾಜದಲ್ಲಿನ ಜಾತಿ, ವರ್ಗ, ಅಸಮಾನತೆ ಮತ್ತು ಕಂದಾಚಾರಗಳ ವಿರುದ್ಧ ಹೋರಾಡಿ ಸಮಾನತೆ, ಮಾನವೀಯತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಾರಿದ ಸಮಾಜ ಸುಧಾರಕರಾಗಿದ್ದಾರೆ.

ಅವರಿಗೆ ಅವಹೇಳನಕಾರಿ ಪದಗಳನ್ನು ಬಳಸುವುದು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ ಕೃತ್ಯವಾಗಿದೆ. 

             ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಇಡೀ ಮಾನವಕುಲಕ್ಕೆ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶ ನೀಡಿದ ವಿಶ್ವಗುರುವಾಗಿದ್ದಾರೆ. ಅವರ ವಚನಗಳು ಇಂದಿಗೂ ಸಮಾಜಕ್ಕೆ ದಾರೀದೀಪವಾಗಿವೆ. ಇಂತವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ.ರಾಜ್ಯ ಸರ್ಕಾರ ಕೂಡಲೇ ಈ ವಿವಾದಿತ ಬಸವ ಮಂಟಪ ಕೃತಿಯಲ್ಲಿರುವ ಆಕ್ಷೇಪಾರ್ಹ ಅಂಶಗಳನ್ನು ಪರೀಶೀಲಿಸಿ, ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು.

      ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇವೆ. ಬೆಳಗಾವಿ ವಿಭಾಗೀಯ ಸಂಘಟನಾ ಸಂಚಾಲಕ ಹನಮಂತ ಚಿಮ್ಮಲಗಿ, ಜಿಲ್ಲಾ ಸಂಘಟನಾ ಸಂಚಾಲಕ ಆನಂದ ದೊಡಮನಿ, ಕೃಷ್ಣಮೂರ್ತಿ ನಾಯ್ಕರ್, ಸಂಗಣ್ಣ ಮಡ್ಡಿ, ಲಕ್ಷ್ಮಣ ಹರಿಜನ, ಚಂದ್ರು ಹರಿಜನ, ಮಾರುತಿ ಮರೆಗುದ್ದಿ, ಲಗಮಣ್ಣ ಮಾದರ, ಅರ್ಜುನ ದೊಡಮನಿ, ಪರಶುರಾಮ ಮಾಂಗ ಸೇರಿದಂತೆ ಸಂಘಟನೆಯ ಮುಖಂಡರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ. 


ಸುದ್ದಿ ಓದಿ