ಜಮಖಂಡಿ ತಾಲೂಕ ಪಂಚಾಯತ್ ಅಧಿಕಾರಿಯ ಮನೆ ಮೇಲೆ ಬೆಳಂಬೆಳಗ್ಗೆ ಲೋಕಾಯುಕ್ತ ದಾಳಿ
ಲೋಕದರ್ಶನ ವರದಿ
ಜಮಖಂಡಿ 18 : ಜಮಖಂಡಿ ತಾಲೂಕ ಪಂಚಾಯತನ ಸಹಾಯಕ ನಿರ್ದೇಶಕ ಹಾಗೂ ಪಂಚಾಯತ ರಾಜ್ ಇಲಾಖೆಯ ಅಧಿಕಾರಿ ಸಂಜು ಹಿಪ್ಪರಗಿ ಅವರ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ನಗರದ ಕುಡಚಿ ರಸ್ತೆಯ ವಿಜಯನಗರದಲ್ಲಿರುವ ಅವರ ನಿವಾಸದ ಮೇಲೆ ಹಾಗೂ ಮೈಗೂರ ರಸ್ತೆ ಬಳಿ ಇರುವ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಪರೀಶೀಲನೆ ಕೈಗೊಂಡಿದೆ.
ಬೆಳಗಿನ ಜಾವ ಸುಮಾರು 20ರಿಂದ 25 ಜನ ಲೋಕಾಯುಕ್ತ ಅಧಿಕಾರಿಗಳು ಮನೆಗೆ ಆಗಮಿಸಿ ತನಿಖೆ ನಡೆಸಿದ್ದು, ಮನೆಯಲ್ಲಿರುವ ದಾಖಲೆಗಳು ಹಾಗೂ ಇತರ ಮಾಹಿತಿಗಳನ್ನು ಪರೀಶೀಲಿಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿಯಿಂದ ಜಮಖಂಡಿ ನಗರದಲ್ಲಿ ಬೆಳಗ್ಗೆಯೇ ಕುತೂಹಲ ಮೂಡಿದ್ದು, ದಾಳಿಯ ಕುರಿತು ಹೆಚ್ಚಿನ ಮಾಹಿತಿ ನೀರೀಕ್ಷಿಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬಂದ ಬಳಿಕ ಪ್ರಕರಣದ ಸಂಪೂರ್ಣ ವಿವರ ತಿಳಿದುಬರಲಿದೆ.