ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸದು: ಆರ್. ಶಂಕರ
ರಾಣೇಬೆನ್ನೂರ 26: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಥಾನಕ್ಕೆ ಧಕ್ಕೆ ಬರುವಂತೆ ಕುತಂತ್ರ ರಾಜಕಾರಣ ಮಾಡುತ್ತಿರುವ ರಾಜ್ಯಪಾಲರ ಕ್ರಮ ಖಂಡಿಸಿ ಮತ್ತು ರಾಜ್ಯಪಾಲರನ್ನು ರಾಜ್ಯದಿಂದ ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಅಹಿಂದ ಹಾಗೂ ವಿವಿಧ ಸಮಾಜದ ಮುಖಂಡರ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಸೋಮವಾರದಂದು ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಆರ್ ಎಚ್ ಭಾಗವಾನರಿಗೆ ಮನವಿ ಅರ್ಿಸಲಾಯಿತು.
ಮಾಜಿ ಸಚಿವ ಆರ್ ಶಂಕರ ಮಾತನಾಡಿ ಕುರುಬ ಸಮಾಜದ ಕಣ್ಮಣಿ ಯಾವುದೇ ಕಪ್ಪು ಚುಕ್ಕಿಯಲ್ಲದೆ ಸ್ವಚ್ಛವಾದ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ಅಭಾದಿತವಾಗಿದೆ. ಅವರನ್ನು ಕುರ್ಚಿಯಿಂದ ಕೆಳಗಿಳಿಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ನವರು ಹುನ್ನಾರ ನಡೆಸಿದ್ದು, ಯಾವುದೇ ಫಲ ನೀಡದು ಎಂದರು. ಬಡವರ ಬಾಳಿಗೆ ಬೆಳಕಾಗಿರುವ ಗ್ಯಾರಂಟಿಯ ನೇತಾರ ಮುಖ್ಯಮಂತ್ರಿ ಅವರನ್ನು ಯಾವುದೇ ಕಾರಣಕ್ಕೂ ಅವರ ಸ್ಥಾನದಿಂದ ಕೆಳಗಿಳಿಯುವುದಿಲ್ಲ, ಅಂತಹ ತಪ್ಪು ಸಿದ್ದರಾಮಯ್ಯನವರು ಏನೂ ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸದು ಎಂದರು.
ರಾಜ್ಯದ ಜನರು ಬಿಜೆಪಿ ಹಾಗೂ ಜೆಡಿಎಸ್ ನವರ ಕುತಂತ್ರವನ್ನು ವೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಈಗಾಗಲೇ ತಿರುಗೇಟು ನೀಡಿದೆ. ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯನವರಿಗೆ ಅಭಯ ನೀಡಿದೆ. ರಾಜ್ಯದ ಜನರಲ್ಲಿ ಮೈತ್ರಿ ಪಕ್ಷಗಳು ತಪ್ಪು ಸಂದೇಶ ನೀಡುತ್ತಿರುವುದು ವಿಷಾದನೀಯ ಎಂದರು.
ಶಾಸಕ ಪ್ರಕಾಶ್ ಕೊಳವಾಡ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಮ್ಮಿಶ್ರವಾಗಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ವ್ಯವಸ್ಥಿತ ಕುತಂತ್ರ ಬುದ್ಧಿ ಅನುಸರಿಸುತ್ತಿವೆ. ಒಡೆದಾಳವ ನೀತಿ ಅನುಸರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬ್ರಿಟಿಷರಿದ್ದಂತೆ, ಇವರ ವರ್ತನೆ ಹೀಗೆ ಮುಂದುವರೆದರೆ ರಾಣೆಬೆನ್ನೂರನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಹಿಂದ ಮುಖಂಡ ರತ್ನಾಕರ ಕುಂದಾಪುರ ಮಾತನಾಡಿ ರಾಜ್ಯಪಾಲರನ್ನು ಕರ್ನಾಟಕದಿಂದ ಕರೆಯಿಸಿಕೊಳ್ಳಬೇಕು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವ ಕುತಂತ್ರ ಮಾಡುತ್ತಿರುವ ರಾಜ್ಯಪಾಲರು ರಾಜ್ಯದಿಂದ ಮೊದಲು ತೊಲಗಬೇಕು. ಬಿಜೆಪಿ ಏಜಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು ರಾಷ್ಟ್ರಪತಿಗಳು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ಮೃತ್ಯುಂಜಯ ಗುದಿಗೇರ, ಪೈಲ್ವಾನ್ ಆನಂದ ಹುಲ್ಬನ್ನಿ, ಪುಟ್ಟಪ್ಪ ಮರಿಯಮ್ಮನವರ, ರಾಮಣ್ಣ ನಾಯಕ, ಕೃಷ್ಣಮೂರ್ತಿ ಸುಣಗಾರ, ರವೀಂದ್ರಗೌಡ ಪಾಟೀಲ, ಷಣ್ಮುಖಪ್ಪ ಕಂಬಳಿ, ಸಿದ್ದಪ್ಪ ಅಂಬಲಿ , ಮಲ್ಲೇಶಪ್ಪ ಮದ್ಲೇರ, ಸುರೇಶ ಜಾಡಮಾಲಿ, ಸಣ್ಣತಮ್ಮಪ್ಪ ಬಾರ್ಕಿ, ಶೇರುಖಾನ ಕಾಬೂಲಿ, ಹನುಮಂತಪ್ಪ ಕಬ್ಬಾರ, ಕೃಷ್ಣಪ್ಪ ಕಂಬಳಿ, ಅಶೋಕ ಟಿಕಾರೆ, ಟಿ. ಕೆ. ಲಮಾಣಿ,ಸೇರಿದಂತೆ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಸ್ಥಳೀಯ ಕೆಇಬಿ ದೇವಸ್ಥಾನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಬಸ್ ನಿಲ್ದಾಣದ ಎದುರು ಅಹಿಂದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಮಾನವ ಸರಪಳಿ ನಿರ್ಮಿಸಿ ರಾಜ್ಯಪಾಲರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರಲ್ಲದೇ ಸಿದ್ದರಾಮಯ್ಯನವರ ಪರ ಜಯಘೋಷ ಕೂಗಿದರು.