ಕೋವಿಡ್ ನಿಯಮವಿಲ್ಲ, ಸಾರ್ವಜನಿಕರಲ್ಲಿ ಭಯವಿಲ್ಲ
ಗುಳೇದಗುಡ್ಡ22: ಮದುವೆ ಸೀಜನ್ ಆಗಿರುವುದರಿಂದ ಸ್ಥಳೀಯ ಹಾಗೂ ಸುತ್ತುಮುತ್ತಲಿನ ಗ್ರಾಮಗಳ ಜನರು ಪಟ್ಟಣದ ಪಾತ್ರೆ, ಬಂಗಾರ, ಬಟ್ಟೆ ಹೀಗೆ ವಿವಿಧ ಅಂಗಡಿಗಳಿಗೆ ಜನ ನೂರಾರು ಸಂಖ್ಯೆಯಲ್ಲಿ ಗುಂಪುಗುಂಪಾಗಿ ಬಂದು ಖರೀದಿಗೆ ನೂಕುನುಗ್ಗಲು ಮಾಡುತ್ತಿದ್ದಾರೆ. ಇದರಿಂದ ಅಪಾಯದ ಮುನ್ಸೂಚನೆ ದೂರವಿಲ್ಲವೆಂದು ಸಾರ್ವಜನಿಕರು ಭಯಪಡುವಂತಾಗಿದೆ.
ಮಾಸ್ಕ್, ಸಾಮಾಜಿಕ ಅಂತರ ಏನೂ ಕೇಳುವ ಹಾಗಿಲ್ಲ ಅಲ್ಲಿ. ಗ್ರಾಮಗಳಿಂದ ಮದುವೆ ಸಂತೆಗೆ ಬರುವ ಜನರು ಖಾಸಗಿ ವಾಹನಗಳನ್ನು ರಸ್ತೆ ಮೇಲೆಯೇ ನಿಲ್ಲಿಸಿ ಸಂಚಾರಕ್ಕೆ ಅಡತಡೆ ಸಹ ಮಾಡುತ್ತಿದ್ದೂ ಸಂಬಂಧಪಟ್ಟ ಯಾವ ಇಲಾಖೆಯವರೂ ಇದರತ್ತ ನೋಡುತ್ತಿಲ್ಲವೆಂಬುದು ಸಾರ್ವಜನಿಕರ ಆತಂಕದ ಮಾತು. ವ್ಯಾಪಾರದ ಭರಾಟೆಯಲ್ಲಿ ಜನ ಕೋವಿಡ್ ಮರೆತಂತೆ ಕಂಡು ಬರುತ್ತಿದ್ದೂ ಕಟ್ಟುನಿಟ್ಟಿನ ಕ್ರಮಕ್ಕೆ ತಾಲೂಕಾ ಆಡಳಿತ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನ ಕೇಂದ್ರ ಸ್ಥಳವಾಗಿರುವ ಗುಳೇದಗುಡ್ಡ ಹಾಗೂ ಗ್ರಾಮಗಳಲ್ಲಿ ಸರಿಯಾಗಿ ಕೋವಿಡ್ ನಿಯಮಗಳನ್ನು ಪಾಲಿಸದ ಜನ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವಿಲ್ಲದೇ ಹೆಚ್ಚಿಗೆ ಅಂದರೆ ಕೋವಿಡ್ ಭಯವಿಲ್ಲದೇ ಸಂಚರಿಸುತ್ತಿರುವುದು, ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವುದು, ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿರುವುದು, ಯಾವುದೇ ಭಯವಿಲ್ಲದೇ ಜನ ತಮ್ಮಪಾಡಿಗೆ ತಾವು ಮಾರುಕಟ್ಟೆ, ಸಂತೆ, ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡುತ್ತಿರುವುದು ಗುರುವಾರ ಸಾಮಾನ್ಯವಾಗಿ ಸಂತೆ ದಿನವಾಗಿದ್ದರಿಂದ ಭಾರತ ಮಾರ್ಕೆಟ್ದಲ್ಲಿ ಹಾಗೂ ಹತ್ತಿರದ ಬಾಲಕರ ಸರ್ಕಾರಿ ಹೈಸ್ಕೂಲ್ ಬಯಲು ಹೀಗೆ ಎರಡೂ ಕಡೆ ಸಂತೆಗೆ ತಾಲೂಕಾ ಆಡಳಿತ ಹಾಗೂ ಪುರಸಭೆ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಅದರೆ ಸಂತೆಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲದೇ ಜನ ವ್ಯಾಪಾರ ಮಾಡುತ್ತಿದ್ದರು.
ಜಿಲ್ಲಾಡಳಿತ ಜನರಿಗೆ ಕೋರೊನಾ ಮುಂಜಾಗೃತೆ ಕುರಿತು ಯಾವುದೇ ಮಾಹಿತಿ ಇರಲಿಲ್ಲವೇನೋ ಎಂಬುದು ಸ್ಪಪ್ಟವಾಗುವಂತಿತ್ತು. ಭಾರತ ಮಾರುಕಟ್ಟೆಯಲ್ಲಿ ಜನ ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದರು. ಹೈಸ್ಕೂಲ್ ಬಯಲು ಸಾಕಷ್ಟು ವಿಶಾಲವಾಗಿದ್ದರೂ ಕೆಲವು ಕಡೆಗಳಲ್ಲಿ ವ್ಯಾಪಾರಸ್ಥರು ಮಾತ್ರ ಸಾಮಾಜಿಕ ಅಂತರ ಮರೆತು ವ್ಯಾಪಾರ ಮಾಡುತ್ತಿದ್ದರು. ಕೋವಿಡ್ ಎರಡನೆಯ ಅಲೆ ಹೆಚ್ಚುತ್ತಿದ್ದರೂ ಜನ ಮಾತ್ರ ಭಯವಿಲ್ಲದೆಯೇ ರಸ್ತೆಗೆ ಬರುತ್ತಿದ್ದಾರೆ. ಮಾಸ್ಕ್ ಧರಿಸುತ್ತಿಲ್ಲ. ಈ ಹಿಂದೆ ಮಾಸ್ಕ್ ಬಳಸದ ಸಾರ್ವಜನಿಕರಿಗೆ ದಂಡ ಹಾಕಿದಂತೆ ಇನ್ನುಮುಂದೆಯೂ ಅದೇ ಕ್ರಮವನ್ನು ಮುಂದುವರೆಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಈಗ ಜನದಟ್ಟಣೆ ಹೆಚ್ಚುತ್ತಿದೆ. ಕೆಲವು ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ನಿಯಂತ್ರಣ ಇದ್ದರೆ ಜನ ಅದರಿಂದ ಭಯದಿಂದ ನಿಯಮ ಪಾಲಿಸಬಲ್ಲರು. ಪವಾರ ಕ್ರಾಸ, ಭಂಡಾರಿ ಕಾಲೇಜ ಸರ್ಕಲ್, ಬಸ್ ನಿಲ್ದಾಣ, ಹಾದಿ ಬಸವೇಶ್ವರ ಗುಡಿ ಸರ್ಕಲ್ ಈ ಮುಂತಾದ ಸ್ಥಳಗಳು ಸದಾ ಜನದಟ್ಟಣೆಯಿಂದ ಕೂಡಿರುತ್ತವೆ. ಈ ಸ್ಥಳಗಳಲ್ಲಿ ನಿತ್ಯ ಪೊಲೀಸರು ಇದ್ದರೆ ಜನ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮಾಡಬಲ್ಲರು ಎಂದು ಜನ ಹೇಳುತ್ತಾರೆ. ಕೋವಿಡ್ ಸೋಂಕು ದಿನೇದಿನೇ ಹೆಚ್ಚುತ್ತಿರುವುದರಿಂದ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಬೇಕಾಗಿದೆ. ಗ್ರಾಮಗಳಿಂದ ಖಾಸಗಿ ವಾಹನಗಳು ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ತರುತ್ತಿದ್ದಾರೆ. ಖಾಸಗಿ ವಾಹನಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಅವರಿಗೆ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸುತ್ತಿಲ್ಲ.
ಸರ್ಕಾರಿ ಬಸ್ಗಳ ನೌಕರರು ಕೆಲದಿನ ಮುಷ್ಠರದಲ್ಲಿ ತೊಡಗಿದ್ದರಿಂದ ಗ್ರಾಮಗಳಿಂದ ಬರುವ ಖಾಸಗಿ ವಾಹನಗಳು ಟಾಪ್ಸರ್ವಿಸ್ ಅನಿವಾರ್ಯವಾಗಿ ನೀಡಿದವು. ಕೋವಿಡ್ ನಿಯಮ ಅಲ್ಲಿಯೂ ಗಾಳಿಗೆ ತೂರಿದ್ದು ಸಾರ್ವಜನಿಕರಲ್ಲಿ ಕೋರೋನಾ ಭೀತಿ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬಂದರೆ ಹೇಗೆ ಎಂಬ ಭೀತಿ ಈಗ ಪ್ರಕ್ಞಾವಂತರಲ್ಲಿ ಹೆಚ್ಚುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಮುಂಜಾಗ್ರತೆವಹಿಸುವುದು ಅಗತ್ಯವಾಗಿದ್ದರೂ ಕಟ್ಟುನಿಟ್ಟಿನ ಕ್ರಮ ಇನ್ನೂ ಕಂಡುಬರುತ್ತಿಲ್ಲ.