ಭಾರತ ಸೇವಾದಳದ ಕಾರ್ಯ ಶ್ಲಾಘನೀಯ : ಕರ್ಜಗಿ
ಸಿಂದಗಿ15: ಪ್ರಾಮಾಣಿಕತೆ ಹಾಗೂ ದೇಶಭಕ್ತಿ ತುಂಬಿದ ಜನತೆಯೇ ಈ ದೇಶದ ಸಂಪತ್ತು ಎಂದು ಪಿಇಎಸ್ ಶಿಕ್ಷಣ ಸಂಸ್ಥೆಯ ಗೌರವಕಾರ್ಯದರ್ಶಿ, ಭಾರತೀಯ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಹೇಳಿದರು.
ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಭಾರತೀಯ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ, ಪಿಇಎಸ್ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಭಾರತ ಸೇವಾದಳ ಹಾಗೂ ಕೊವೀಡ್-19 ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಉದಾತ್ತ ಧ್ಯೇಯ ತುಂಬಿ, ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಬೆಳೆಸುತ್ತಿರುವ ಭಾರತ ಸೇವಾದಳದ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ತರಬೇತಿ, ಶಿಕ್ಷಣ, ಸೇವೆ, ರಾಷ್ಟ್ರೀಯತೆ, ಸಾರ್ವಜನಿಕ ರಕ್ಷಣೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಕ್ರಮಗಳು ಸೇವಾದಳದ ಮೂಲಕ ನಡೆಯುತ್ತಿವೆ. ಅವುಗಳನ್ನು ಸಮರ್ಕವಾಗಿ ಅನುಷ್ಠಾನಗೊಳಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ಫಲಿತಾಂಶವನ್ನೇ ಆಧರಿಸಿರುವ ಶಿಕ್ಷಣ ನೀತಿಯಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಸಮಾಜ ಸೇವಾ ಮನೋಭಾವ ಬಾಲ್ಯದಿಂದಲೇ ಅಳವಡಿಸಿಕೊಳ್ಳುವಂತೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಸೇವಾದಳ ಉತ್ತಮ ಕಾರ್ಯವೆಸಗುತ್ತಿದೆ ಎಂದರು.
ಮುಖ್ಯತಿಥಿಗಳಾಗಿ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ ಮಾತನಾಡಿ, ಬಾರತೀಯ ಸೇವಾದಳ ಎಂದರೆ ದೇಶಪ್ರೇಮ, ಶಾಂತಿ, ಶಿಸ್ತು, ತ್ಯಾಗ ಎಂದೇ ಅರ್ಥ. ಸೇವಾದಳದ ಕಾರ್ಯಚಟುವಟಿಕೆಗಳು ಹೆಚ್ಚುತ್ತಾ ಹೋಗಬೇಕು. ಇದರಿಂದ ಸಮಾಜದಲ್ಲಿ ಭಾವೈಕ್ಯತೆ ಮೂಡುತ್ತದೆ. ಮಕ್ಕಳಲ್ಲಿ ಸಮಾನತೆ, ಸಹಬಾಳ್ವೆಯನ್ನು ಸೇವಾದಳ ಕಲಿಸುತ್ತದೆ. ಸೇವಾದಳ ರಾಷ್ಟ್ರೇ್ರಮ ಬೆಳೆಸುತ್ತದೆ. ನಿಷ್ಠೆಯ ಸೇವೆ ಇಂದು ಬಹಳ ಮುಖ್ಯ. ಶಾಲೆಗಳಲ್ಲಿ ಶಾಖೆಗಳನ್ನು ತೆರೆಯುವುದರಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮತ್ತು ಮಾನವೀಯತೆ ಬೆಳೆವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಭಾರತ ಸೇವಾದಳದ ಸಂಪನ್ಮೂಲ ವ್ಯಕ್ತಿ ಎಸ್.ಡಿ. ಕುಂಬಾರ ಮಾತನಾಡಿ, ಸರಕಾರ ಕೂಡ ಸೇವಾದಳಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಇದರ ಶಾಖೆಗಳು ಕೇವಲ ಶಾಲೆಗಳಲ್ಲಿ ಅಲ್ಲದೇ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲೂ ಕೂಡ ವಿಸ್ತಾರವಾಗಬೇಕು. ಸರಕಾರದ ಆದೇಶ ಕೂಡ ಕಾಲೇಜಿನಲ್ಲಿ ಸೇವಾದಳ ಘಟಕ ತೆರೆಯಲು ಇದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪಿಇಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಆರ್.ಬಿ. ಗೋಡಕರ, ಪಿಇಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್. ಕಡಣಿ, ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ, ತಾಲೂಕಾ ಸಂಘಟಿಕ ಡಿ.ಸಿ. ಜಾದವ, ಸಂಪನ್ಮೂಲ ಶಿಕ್ಷಕ ಎನ್.ಜಿ. ಸಿಂಗೆ ಅವರು ವೇದಿಕೆ ಮೇಲೆ ಇದ್ದರು.
ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ, ಸಂಪನ್ಮೂಲ ವ್ಯಕ್ತಿ ಎಸ್.ಡಿ. ಕುಂಬಾರ ಅವರು ಭಾರತ ಸೇವಾದಳ ಹಾಗೂ ಕೊವೀಡ್-19 ಮಾಹಿತಿ ನೀಡಿ ತರಬೇತಿ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಉಚಿತವಾಗಿ ವಿತರಿಸಿದರು.
ಪಿಇಎಸ್ ಶಿಕ್ಷಣ ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆಗಳಾದ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಚಾರ್ಯ ಜಿ.ಎಸ್. ಕಡಣಿ ಸ್ವಾಗತಿಸಿದರು. ಡಿ.ಸಿ. ಜಾಧವ ನಿರೂಪಿಸಿದರು. ಎನ್.ಜಿ. ಸಿಂಗೆ ವಂದಿಸಿದರು.