ಕಾಗವಾಡ

ಲಾಕ್‌ಡೌನ್ ಸಮಯದಲ್ಲಿ ಕರೊನಾ ಯೋಧರ ಕಾರ್ಯ ಶ್ಲಾಘನೀಯ

ಲಾಕ್‌ಡೌನ್ ಸಮಯದಲ್ಲಿ ಕರೊನಾ ಯೋಧರ ಕಾರ್ಯ ಶ್ಲಾಘನೀಯ

ಶಾಸಕ ಶ್ರೀಮಂತ ಪಾಟೀಲ ಪ್ರಶಂಸೆ:  ವೈದ್ಯರು, ಅಂಗನವಾಡಿ-ಆಶಾ ಕಾರ್ಯಕರ್ತೆಯರಿಗೆ ಸನ್ಮಾನ 

ಶೇಡಬಾಳ 31: ಕರೊನಾ ಲಾಕ್‌ಡೌನ್ ಸಮಯದಲ್ಲಿ ರಾಜ್ಯ ಜನರೆಲ್ಲ ತಮ್ಮ ಕುಟುಂಬ ಸಮೇತರಾಗಿ ಜೀವ ರಕ್ಷಣೆಗೆ ತಮ್ಮ ಮನೆಯಲ್ಲಿ ಇದ್ದಾಗ ತಮ್ಮ ಜೀವದ ಹಂಗು ತೊರೆದು, ಸಾರ್ವಜನಿಕರ ಜೀವ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿದ ವೈದ್ಯರು, ಅಂಗನವಾಡಿ-ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ. ಅವರ ಕಾರ್ಯವನ್ನು ವರ್ಣಿಸಲು ಶಬ್ದಗಳೇ ಸಾಲದು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಭಾವುಕರಾಗಿ ಹೇಳಿದರು. 

ಅವರು ರವಿವಾರ ದಿ. 31 ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ಕನ್ವೇನಶನ್ ಹಾಲ್‌ನಲ್ಲಿ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಕರೊನಾ ವಿರುದ್ಧ ಹೋರಾಡಿದ ಯೋಧರನ್ನು ಸನ್ಮಾನಿಸಿ, ಮಾತನಾಡುತ್ತಿದ್ದರು 

ಆಗಿನ ಲಾಕ್‌ಡೌನ್ ಸಮಯವನ್ನು ನೆನಪಿಸಿಕೊಂಡಾಗ ಈಗಲೂ ಎದೆ ಝಲ್ ಅನ್ನುತ್ತದೆ. ಒಬ್ಬರ ಹತ್ತಿರ ಒಬ್ಬರು ಬರುವಂತಿಲ್ಲ. ಎಲ್ಲರನ್ನು ಸಂಶಯದ ದೃಷ್ಟಿಯಿಂದ ನೋಡುವಂತ ಪರಿಸ್ಥಿತಿ ಎದುರಾಗಿತ್ತು. ಶವ ಸಂಸ್ಕಾರಕ್ಕೂ ಜನರು ಬಾರದೇ ಇರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂಧಿಗ್ಧ ಸಮಯದಲ್ಲಿ ತಮ್ಮ ಬಂದು-ಬಳಗವನ್ನು ಬಿಟ್ಟು, ಜನರ ಸೇವೆ ಮುಖ್ಯ ಗುರಿಯನ್ನಾಗಿಸಿಕೊಂಡ ಕರೊನಾ ಯೋಧರ ಕಾರ್ಯ ವರ್ಣಾತೀತವಾಗಿದೆ. ಅವರ ಸೇವೆಯ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಅಂಗನವಾಡಿ-ಆಶಾ ಕಾರ್ಯಕರ್ತೆಯರು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ಆಗಿದ್ದು, ಶಾಸಕನಾಗಿ ನಾನು ಆ ಎಲ್ಲ ತಾಯಂದಿರನ್ನು ನಮ್ಮ ಮಾತೋಶ್ರೀ ಸ್ಥಾನವನ್ನು ನೀಡಿ, ಗೌರವಿಸಿ, ಅಭಿನಂದಿಸುತ್ತೇನೆಂದು ಅವರು ಹೇಳಿದರು. 

ಕಾರ್ಯಕ್ರಮದ ಅಂಗವಾಗಿ ಇದೇ ಸಮಯದಲ್ಲಿ ಸಾವಿರಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆಶಾ-ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹಾಗೂ ಪತ್ರಕರ್ತರಿಗೆ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ, ಸತ್ಕರಿಸಲಾಯಿತು. ಇದೇ ವೇಳೆ ಕರ್ನಾಟಕ ಸರ್ಕಾರದ ವತಿಯಿಂದ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ 40 ಮಹಿಳಾ ಸ್ವ-ಸಹಾಯ ಸಂಘಗಳಿಗೆ ತಲಾ ಒಂದು ಲಕ್ಷ ರೂಪಾಯಿ ಚೆಕ್‌ಗಳನ್ನು ಶಾಸಕ ಶ್ರೀಮಂತ ಪಾಟೀಲ ವಿತರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು ಮತ್ತು ಕೃಷ್ಣಾ ಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮಿಜಿ ಸಭೆಯನ್ನು ಉದ್ದೇಶಿಸಿ, ಮಾತನಾಡುತ್ತ ನಾವು ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಅವರನ್ನು ನೋಡಿಲ್ಲ. ಆದರೆ ಕರೊನಾ ಸಮಯದಲ್ಲಿ ಅಂಗನವಾಡಿ-ಆಶಾಕಾರ್ಯಕರ್ತೆಯರಲ್ಲಿ ಅವರನ್ನು ಕಂಡೆವು. ಶ್ರೀಮಂತ ಪಾಟೀಲರು ಹೆಸರಿಗೆ ಮಾತ್ರ ಶ್ರೀಮಂತರಲ್ಲ. ಅವರ ಮನಸ್ಸು ಕೂಡಾ ಶ್ರೀಮಂತವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಮಯದಲ್ಲಿ ಯುವ ಮುಖಂಡ ಶ್ರೀನಿವಾಸ ಪಾಟೀಲ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರ್ಲಿ, ಡಾ. ಪುಷ್ಪಲತಾ ಸುಣ್ಣದಕಲ್ಲ, ಡಾ. ಆನಂದ ಮುತಾಲಿಕ, ಕಾಗವಾಡ ಬಿಜೆಪಿ ಬ್ಲಾಕ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಶೀತಲ ಪಾಟೀಲ, ವಿನಾಯಕ ಬಾಗಡಿ, ಬಸವರಾಜ ಪಾಟೀಲ, ಅಭಯ ಅಕಿವಾಟೆ, ದಾದಾ ಪಾಟೀಲ, ಬೊಮ್ಮಣ್ಣ ಚೌಗುಲೆ, ಅಣ್ಣಾಸಾಬ ಪಾಟೀಲ, ರಾಜೇಂದ್ರ ಪೋತದಾರ, ಸುಧಾಕರ ಗಣೇಶವಾಡಿ ಸಿಡಿಪಿಓ ಸಂಜಯ ಸದಲಗೆ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು. 


ಸುದ್ದಿ ಓದಿ