4ನೇ ದಿನಕ್ಕೆ ನೇಕಾರರ ಧರಣಿ ; ಧರಣಿ ಸ್ಥಳಕ್ಕೆ ಬಿಜೆಪಿ, ಜೆಡಿಎಸ್ ಮುಖಂಡರ ಭೇಟಿ
ಗುಳೇದಗುಡ್ಡ.16: ನೇಕಾರ ಫಲಾನುಭವಿಗಳಿಗೆ ನಿವೇಶನ ನೀಡುವಂತೆ, ಗಜಾನನ ಸಹಕಾರಿ ಸಂಘದ ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದಲ್ಲಿ ಹಿರಿಯ ನಾಗರಿಕ ಪ್ರಜಾ ಜಾಗೃತ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ಸ್ಥಳಕ್ಕೆ ಬಿಜೆಪಿ ಜೆಡಿಎಸ್ ಮುಖಂಡರು ಭೇಟಿ ನೀಡಿದ್ದು ನೇಕಾರ ಫಲಾನುಭವಿಗಳಿಗೆ ನಿವೇಶನ ನೀಡುವ ಹಾಗೂ ಇತರೆ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಮಾತನಾಡುವ ಭರವಸೆ ನೀಡಿದ್ದಾರೆ.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಮುಖಂಡರಾದ ಅಶೋಕ ಹೆಗಡೆ, ರವೀಂದ್ರ ಪಟ್ಟಣಶೆಟ್ಟಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ನೇಕಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ. 106 ಜನ ನೇಕಾರ ಫಲಾನುಭವಿಗಳಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ. ಅಲ್ಲದೇ ನೇಕಾರ ಸಂಘದಿಂದ ಆದ ಸಮಸ್ಯೆ ಕುರಿತು ಕೂಡಾ ಸಂಬಂಧಪಟ್ಟವರೊಂದಿಗೆ ಮಾತನಾಡುವ ಭರವಸೆ ನೀಡಿದರು.
ವೇದಿಕೆ ಅಧ್ಯಕ್ಷ ವಿ.ಜಿ.ಮ್ಯಾಗಿನಹಳ್ಳಿ ಪ್ರತಿಕ್ರಿಯಿಸಿ, ನೇಕಾರರಿಗೆ ಮೋಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳು ನೇಕಾರರು ನಡೆಸಿರುವ ಧರಣಿ ಕೈಬಿಡಲು ಹೇಳುತ್ತಿದ್ದಾರೆ. ಅಲ್ಲದೇ ಉಪವಿಭಾಗಾಧಿಕಾರಿಗಳು ಧರಣಿ ನಿರತ ನೇಕಾರರಿಗೆ ಅವಮಾನ ಮಾಡಿದ್ದಾರೆ. ಅವರು ಕ್ಷಮೆ ಕೇಳಬೇಕು. ಮತ್ತು ಗಜಾನನ ಸಂಘದ ಅಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ತನಕ ಧರಣಿ ಕೈಬಿಡುವುದಿಲ್ಲವೆಂದು ಅವರು ಪಟ್ಟು ಹಿಡಿದರು.
ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ರಂಗಪ್ಪ ಶೇಬಿನಕಟ್ಟಿ, ರಾಘು ಪತ್ತಾರ, ಸಚಿನ ರಾಂಪೂರ ಇದ್ದರು. ಪ್ರಜಾ ಜಾಗೃತ ವೇದಿಕೆಯ ಈರಮ್ಮ ಗಾಡದ, ಲಕ್ಷ್ಮೀಬಾಯಿ ರೂಢಗಿ, ಎಸ್.ಬಿ.ಹೊಕ್ರಾಣಿ, ಬಸಲಿಂಗಪ್ಪ ಇಂಡಿ, ವೀರ್ಪ ಬೇವಿನಮರದ, ಈಷ್ಟಲಿಂಗಪ್ಪ ಸೇರಿದಂತೆ ಇತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.