ಧಾರವಾಡ - ಹುಬ್ಬಳ್ಳಿ

ನಮ್ಮ ನಾಗರಿಕತೆಯನ್ನು ಬೆಳೆಸುವಲ್ಲಿ ಪುಸ್ತಕದ ಪಾತ್ರ ಅಪಾರ: ಡಾ. ಬೇವಿನಗಿಡದ

ನಮ್ಮ ನಾಗರಿಕತೆಯನ್ನು ಬೆಳೆಸುವಲ್ಲಿ ಪುಸ್ತಕದ ಪಾತ್ರ ಅಪಾರ: ಡಾ. ಬೇವಿನಗಿಡದ

ಧಾರವಾಡ 13: ನಮ್ಮ ನಾಗರಿಕತೆಯನ್ನು ಬೆಳೆಸುವಲ್ಲಿ ಪುಸ್ತಕದ ಪಾತ್ರ ಅಪಾರವಿದೆ. ಅದು ಬೌದ್ಧಿಕ ಹಕ್ಕು ಹೊಂದಿರುವ ತೆರೆಮರೆಯಲ್ಲಿ ಅವಿಶ್ರಾಂತವಾಗಿ ಪುಸ್ತಕೋದ್ಯಮದಲ್ಲಿ ಶ್ರಮಿಸಿದವರಲ್ಲಿ ಗ್ರಂಥಪಾಲಕರ ಸೇವೆ ಅದ್ವಿತೀಯವಾಗಿದೆ ಎಂದು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ, ಸಾಹಿತಿ ಡಾ. ಬಸು ಬೇವಿನಗಿಡದ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ದಿ. ಪಾರ್ವತೆಮ್ಮ ಬ. ಹೊಂಬಳ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಗ್ರಂಥಪಾಲಕರ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಗ್ರಂಥಗಳು ಜೀವನದ ಕನ್ನಡಿ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ಪ್ರಾಚೀನ ಕಾಲದಲ್ಲಿ ಕಲ್ಲಿನ ಮೇಲೆ, ತಾಡೋಲೆ ಮೇಲೆ, ಮಣ್ಣಿನ ಮೇಲೆ ಬರೆಯುವುದನ್ನು ಕೇಳಿದ್ದೇವೆ. ಇದನ್ನು ಕ್ರಮಬದ್ದವಾಗಿ ಗ್ರಂಥಾಲಯ ವಿಜ್ಞಾನದಲ್ಲಿ ಹೊಸ ರೂಪ ಕೊಟ್ಟು, ಗ್ರಂಥಗಳನ್ನು  ಕ್ಯಾಟಲಾಗ್‌ಗಳ ಮೂಲಕ ಇಡೀ ಭಾರತದಲ್ಲಿ ಸಂಚಲನ ಮೂಡಿಸಿದವರು ಪದ್ಮಶ್ರೀ ಡಾ. ಎಸ್‌.ಆರ್‌. ರಂಗನಾಥನ್ ಎಂದ ಅವರು ಗ್ರಂಥಗಳು ನಮ್ಮ ಉಪಯೋಗಕ್ಕಾಗಿ ಇವೆ. ಪ್ರತಿ ವ್ಯಕ್ತಿನೂ ಮೆಚ್ಚುವಂತಹ ಪುಸ್ತಕಗಳು ಇವೆ. ಪ್ರತಿ ಪುಸ್ತಕಗಳನ್ನು ಓದುವ ಓದುಗರ ಇದ್ದೆ ಇರುತ್ತಾರೆ. ಓದುಗರ ಸಮಯವನ್ನು ಉಳಿಸಬೇಕು. ಗ್ರಂಥಾಲಯದಲ್ಲಿ ಓದುಗರಿಗೆ ಸುಲಭವಾಗಿ ಗ್ರಂಥ ದೊರಕುವಂತಾಗಬೇಕು. ಅದು ಮನುಷ್ಯನಿಗೆ ಬೆಳಕಿನ ದಾರಿ ತೋರಿಸುತ್ತದೆಂದು ಡಾ. ರಂಗನಾಥನ್ ಹೇಳಿಕೊಟ್ಟಿದ್ದನ್ನು ಸ್ಮರಿಸಿದರು.   

ಈಜೀಪ್ತನ್ನರು ಹಾಗೂ 2 ಮತ್ತು 3ನೇ ಶತಮಾನದಲ್ಲಿ ರೋಮನ್ನರು ಮರದ ತೊಗಟೆಯಲ್ಲಿ ಕೆತ್ತಿ ಸಂಗ್ರಹಿಸುವ ರೋಚಕ ಅವಿಷ್ಕಾರ ದೂರದೃಷ್ಟಿಯ ಹಂತಗಳನ್ನು ದಾಟಿ-ದಾಟುತ್ತಾ ಹೊಸ ರೂಪಗಳಲ್ಲಿ ಚರ್ಮದ ಮೇಲೆ ಕೈ ಬರಹದಿಂದ 600 ವರ್ಷಗಳ ಹಿಂದೆ ಮುದ್ರಣ ಯಂತ್ರವನ್ನು (1440) ರಲ್ಲಿ ಜರ್ಮನಿಯ ಗುಟನ್‌ಬರ್ಗ್‌ ಕಂಡು ಹಿಡಿದನು. ಮನುಷ್ಯನಿಗೆ ಬುದ್ಧಿ, ಜ್ಞಾನ, ವಿಕಾಸ ಹೊಂದಬೇಕು ಎಂಬ ಮಹತ್ವದ ಉದ್ದೇಶ ಪುಸ್ತಕದ ಅವಿಷ್ಕಾರ ಎಂದರು.  

ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್‌. ಕೆ. ಸವಣೂರ ಮತ್ತು  ಧಾರವಾಡ ಆಕಾಶವಾಣಿಯ ಗ್ರಂಥಾಲಯಾಧಿಕಾರಿ ಕೆ. ಶಿವರಾಜ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.  

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ಎಸ್‌.ಕೆ. ಸವಣೂರ, ಗಣಿತಶಾಸ್ತ್ರದ ಪ್ರೊಫೆಸರ್‌ರಾಗಿ ಬ್ರಿಟಿಷ ಅಧಿಕಾರಿಗಳಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವರು ಕಷ್ಟಪಟ್ಟು ಬೆಳೆದು ಬಂದ ಅವರ ಯಶೋಗಾಥೆಯನ್ನು ತಿಳಿಸಿದರು. ಗ್ರಂಥಾಲಯ ವಿಜ್ಞಾನ ಹೇಗೆ ಆಗುತ್ತದೆ ಎನ್ನುವುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಿದ ಪ್ರಮುಖರು ಎಂದರು.    

ಕೆ. ಶಿವರಾಜ ಅವರು ಮಾತನಾಡಿ, ಧಾರವಾಡ ಆಕಾಶವಾಣಿ ಗ್ರಂಥಾಲಯದಲ್ಲಿ 1950 ರಿಂದ ಇಲ್ಲಿಯವರೆಗೆ ನಾಡಿನ ಸಾಧಕರ ಧ್ವನಿಮುದ್ರಣಗಳೆಲ್ಲವೂ 2010 ರಿಂದ ಡಿಜಿಟಲೀಕರಣ ಆಗಿವೆ. ಎಲ್ಲಾ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮಹತ್ವದ ದಾಖಲೆಗಳು ಇವೆ ಎಂದು ತಮ್ಮ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.  

ದತ್ತಿದಾನಿ ಜಿ.ಬಿ. ಹೊಂಬಳ ಮಾತನಾಡಿ, ಗ್ರಂಥಾಲಯದಲ್ಲಿ ಎಷ್ಟು ವಿಧಗಳಿವೆ ಎಂಬುದನ್ನು ನಮಗೆ ಸವಿಸ್ತಾರವಾಗಿ ಬ್ರೈಲ್ ಗ್ರಂಥಾಲಯ, ಆಕಾಶವಾಣಿ ಗ್ರಂಥಾಲಯ, ವಿಜ್ಞಾನ ಗ್ರಂಥಾಲಯ, ಕ.ವಿ.ವಿ. ಗ್ರಂಥಾಲಯ, ಮಕ್ಕಳಿಗಾಗಿ ಗ್ರಂಥಾಲಯ ಹೀಗೆ ವೈವಿಧ್ಯವಾಗಿ ಬೆಳೆಯಲು ಕಾರಣರಾದ ಡಾ. ರಂಗನಾಥನ್ ಅವರನ್ನು ಸ್ಮರಿಸಿದರು.  

ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಜಿ.ಬಿ. ಹೊಂಬಳ ಅವರು ಮಕ್ಕಳನ್ನು ಹುಡುಕಿ ಅವರಿಗೆ ಪುಸ್ತಕಗಳನ್ನು ನೀಡಿ ಓದಲು ಹಚ್ಚುವದು ಅವರ ಪ್ರೀತಿಯ ಕರ್ತವ್ಯದಲ್ಲಿ ಒಂದಾಗಿದೆ ಎಂದ ಅವರು ಗ್ರಂಥಪಾಲಕರ ದಿನಾಚರಣೆ ಮಹತ್ವ ಕುರಿತು ತಿಳಿಸಿದರು.  

ಡಾ. ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ಸನ್ಮಾನ ಪತ್ರ ಓದಿದರು ಮತ್ತು ವಂದಿಸಿದರು.  

ಸತೀಶ ತುರಮರಿ, ಶಂಕರ ಕುಂಬಿ, ಡಾ. ಧನವಂತ ಹಾಜವಗೋಳ, ನಿಂಗಣ್ಣ ಕುಂಟಿ, ಬಿ.ಎಸ್‌. ಶಿರೋಳ, ಸಿ.ಯು. ಬೆಳ್ಳಕ್ಕಿ, ಚೋಳಿನ್, ಡಾ. ಆನಂದ ಪಾಟೀಲ, ನಾಗರಾಜ ಹಂಗರಕಿ, ಪ್ರೊ. ಎಸ್‌.ಎಲ್‌. ಸಂಗಮ, ಶ್ರೀನಿವಾಸ ವಾಡಪ್ಪಿ, ಎಂ.ಎಂ. ಚಿಕ್ಕಮಠ, ಡಾ. ಸುರೇಶ ಹೊರಕೇರಿ, ಬಿರಾದಾರ ಸೇರಿದಂತೆ ಹೊಂಬಳ ಪರಿವಾರದವರು, ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ