ಧಾರವಾಡ - ಹುಬ್ಬಳ್ಳಿ

ದೇಶದ ಪ್ರಗತಿ ಜನತೆಯ ಒಗ್ಗಟ್ಟಿನಲ್ಲಿದೆ: ಡಾ. ಅಜಿತ ಪ್ರಸಾದ

ದೇಶದ ಪ್ರಗತಿ ಜನತೆಯ ಒಗ್ಗಟ್ಟಿನಲ್ಲಿದೆ: ಡಾ. ಅಜಿತ ಪ್ರಸಾದ

ಧಾರವಾಡ 16 : ನಮ್ಮಲ್ಲಿರುವ ಒಗ್ಗಟ್ಟು ಎಂತಹ ಕಷ್ಟದ ಕೆಲಸವನ್ನು ಸರಳವಾಗಿಸುತ್ತದೆ.  ಇದಕ್ಕೆ ಸ್ವಾತಂತ್ರ್ಯ ಹೋರಾಟವೇ ಅತಿ ದೊಡ್ಡ ಉದಾಹರಣೆ. ಹಲವಾರು ಮಹೀನೀಯರ ಬಲಿದಾನದ ಮೂಲಕ ಸ್ವಾತಂತ್ರ್ಯ ನಮಗೆ ದೊರೆತಿದೆ. ಅದರ ಬಗ್ಗೆ ಪ್ರತಿಯೊಬ್ಬ ನಾಗರೀಕನಿಗೂ ಜವಾಬ್ದಾರಿ ಇರಬೇಕು. ನಮ್ಮ ದೇಶದ ಯುವಕರಿಗೆ ದೇಶದ ಭವಿಷ್ಯವನ್ನು ಬದಲಿಸುವ ಸಾಮರ್ಥ್ಯವಿದೆ. ಇಡೀ ಜಗತ್ತಿನಲ್ಲಿಯೇ ನಮ್ಮ ದೇಶ ತನ್ನದೇ ಆದ ಸಂಸ್ಕೃತಿ ಸಂಸ್ಕಾರವನ್ನು ಹೊಂದಿದೆ ಅದನ್ನು ಕಾಪಾಡಿಕೊಂಡು ಹೋಗುವ ಕೆಲಸವಾಗಬೇಕಾಗಿದೆ.  ಸರ್ವಧರ್ಮಿಯರು ರಾಷ್ಟ್ರೇ​‍್ರಮವನ್ನು ಹೊಂದಬೇಕು, ದೇಶದ ಒಗ್ಗಟ್ಟು ಹಾಗೂ ಉನ್ನತಿಗಾಗಿ ಶ್ರಮಿಸಬೇಕು ಎಂದು ಇಲ್ಲಿನ ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಆವರಣದಲ್ಲಿ ಆಯೋಜಿಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವವನ್ನು ಕಾರ್ಯದರ್ಶಿ ಡಾ. ಅಜಿತ ಪ್ರಸಾದರವರು ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.  

ಭಾರತದ ಸ್ವಾತಂತ್ರ್ಯಕ್ಕೆ 1857 ರಿಂದ 1947 ರವರೆಗೆ ಹಲವು ದಶಕಗಳ ಕಾಲ ನಮ್ಮ ಪೂರ್ವಜರು ಹೋರಾಡಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಸ್ವಾತಂತ್ರ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ್ಯ ಇದೆ.  ಪೋಷಕರು, ಶಿಕ್ಷರು ಮಕ್ಕಳಿಗೆ ಹೇಳಿಕೊಟ್ಟು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರ್ಥ ಮಾಡಿಸಬೇಕು.  ಹೆಚ್ಚಿನ ನೈತಿಕ ಶಿಕ್ಷಣವನ್ನು ನೀಡಬೇಕು.  ಸ್ವಾತಂತ್ರ್ಯಾ ನಂತರ ಭಾರತ ಆರ್ಥಿಕತೆ, ತಂತ್ರಜ್ಞಾನ, ವಿಜ್ಞಾನ ಒಳಗೊಂಡಂತೆ ಅನೇಕ ಸಾಧನೆಯ ಮೈಲಿಗಲ್ಲನ್ನು ತಟ್ಟುತ್ತಿದ್ದು ಮುಂದೊಂದು ದಿನ ಇಡಿ ಜಗತ್ತಿಗೆ ಮಾದರಿ ದೇಶವಾಗಲಿದೆ ಎಂದು ಹೇಳಿದರು. 

ಅತಿಥಿಗಳಾಗಿ ಆಗಮಿಸಿದ್ದ ಡಾ. ಆರ್‌.ವಿ. ಚಿಟಗುಪ್ಪಿಯವರು ಮಾತನಾಡಿ ಸ್ವಾತಂತ್ರ್ಯದ ಕಿಚ್ಚು ಮೊದಲು ಪಾಳೆಗಾರರು, ಊರಿನ ಜನನಾಯಕರು, ಸಂಸ್ಥಾನಿಕರಿಂದ ಪ್ರಾರಂಭವಾಗಿ ಇಡೀ ದೇಶದ ತುಂಬ ಕಾವು ತೆಗೆದುಕೊಂಡಿತು. ಇದರಲ್ಲಿ ಅಂಹಿಸಾವಾದಿಗಳು ಅಹಿಂಸೆಯ ಮೂಲಕ ಹೋರಾಟದ ಬಿಸಿ ಮುಟ್ಟಿಸಿದರೇ, ಕೆಲವರು ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ಮಾಡಿ ಬ್ರಿಟೀಷ್ ಆಡಳಿತಕ್ಕೆ ಬಿಸಿ ಮುಟ್ಟಿಸಿದ್ದು ರೋಚಕ ಇತಿಹಾಸ. ಸ್ವಾತಂತ್ರ್ಯ ಹೋರಾಟದಲ್ಲಿ ಕೇವಲ ಪುರುಷರು ಅಲ್ಲದೇ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ಅನೇಕ ವೀರವನಿತೆಯರು ಸಹ ಹೊರಾಟ ಮಾಡಿದ್ದಾರೆ ಎಂದು ಹೇಳಿದರು. 

ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥಸಂಚಲನ, ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶ್ರವಣ ಯೋಗಿ ಕಾರ್ಯಕ್ರಮ ನಿರೂಪಿಸಿದರು. ಬಾಹುಬಲಿ ಚೌಗಲಾ ವಂದಿಸಿದರು. ಮಹಾವೀರ ಉಪಾದ್ಯೆ, ಡಾ. ಸೂರಜ್ ಜೈನ್, ಜಿನ್ನಪ್ಪ ಕುಂದಗೋಳ, ಸಾಧನಾ. ಎಸ್‌., ಡಾ. ಶಿವಪ್ರಸಾದ, ಡಾ. ನಾಗಚಂದ್ರ, ಸೇರಿದಂತೆ ಜೆ.ಎಸ್‌.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ