ಆಯತಪ್ಪಿ ಬಿದ್ದ ವಿದ್ಯುತ್ ಕಂಬ, ಇಬ್ಬರಿಗೆ ಗಂಭೀರ ಗಾಯ
ಗುಳೇದಗುಡ್ಡ 18: ಬಸ್ ನಿಲ್ದಾಣದ ಹತ್ತಿರ ಭಾನುವಾರ ವಿದ್ಯುತ್ ಕಂಬಗಳನ್ನು ಬದಲಿಸುವ ಸಂದರ್ಭದಲ್ಲಿ ಕಬ್ಬಿಣದ ಹಳೆಯ ಕಂಬ ತೆಗೆಯುವಾಗ ಆಯತಪ್ಪಿ ಇಬ್ಬರು ವ್ಯಕ್ತಿಗಳ ಮೇಲೆ ಬಿದ್ದ ಪರಿಣಾಮವಾಗಿ ಅವರಿಗೆ ಗಂಭೀರ ಗಾಯಗಳಾದ ಘಟನೆ ಗುಳೇದಗುಡ್ಡದಲ್ಲಿ ಜರುಗಿದೆ. ಪಟ್ಟಣದಲ್ಲಿ ಕಳೆದ ಒಂದು ವರ್ಷದಿಂದ ಆರಂಭವಾಗಿರುವ ಸಂಗಮ ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಆರಂಭವಾಗಿ ವರ್ಷ ಗತಿಸಿದರೂ ಇನ್ನೂ ಮುಗಿಯುತ್ತಿಲ್ಲ. ಇದರಿಂದ ನಿತ್ಯ ಸಾರ್ವಜನಿಕರ ಹಾಗೂ ರಸ್ತೆ ಅಕ್ಕಪಕ್ಕದ ವ್ಯಾಪಾರಿಗಳಿಗೆ ಸಾಕಷ್ಟು ಅನಾನುಕೂಲವೇ ಆಗಿದ್ದು, ಈ ಕಾಮಗಾರಿಯು ವರ್ಷದಲ್ಲಿ 2-3 ಜನರ ಬಲಿ ತೆಗೆದುಕೊಂಡಿದೆ. ಅಷ್ಟೇ ಅಲ್ಲದೇ ಹತ್ತಾರು ಜನರು ಕೈಕಾಲು ಮೂಳೆ ಮುರಿದುಕೊಂಡು ಮೂಲೆಗುಂಪಾಗಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸುಮಾರು ಹತ್ತಾರು ಹೊಸ ವಿದ್ಯುತ್ ಕಂಬಗಳನ್ನು ಹಾಕಿದ್ದೂ, ಅದರ ಪಕ್ಕದ ರಸ್ತೆ ಮೇಲಿರುವ ಹಳೆಯದಾದ ಕಬ್ಬಿಣದ ಹಾಗೂ ಸಿಮೆಂಟಿನ ಕಂಬಗಳನ್ನು ತೆಗೆಯುವಾಗ ಕೆಲಸದ ಮೇಲಿದ್ದ ಇಬ್ಬರು ಕೆಲಸಗಾರರ ಮೇಲೆಯೇ ಕಬ್ಬಿಣದ ಕಂಬ ಬಿದ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೈ ಕಾಲಿನ ಮೂಳೆಗಳಿಗೆ ಪೆಟ್ಟಗಿದೆ. ತಲೆಗೂ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಗಳಾದ ಮೋಹನ ದೋಂಗಡೆ, ಬಸು ಸೂಡಿ ತಿಳಿಸಿದ್ದಾರೆ.
ಸಾರ್ವಜನಿಕರ ಆರೋಪ: ಕಳೆದ ನಾಲ್ಕಾರು ತಿಂಗಳಿಂದ ಬಸ್ ನಿಲ್ದಾಣದ ಹತ್ತಿರ ರಸ್ತೆ ಕಾಮಗಾರಿ ನಡೆದಿದೆಯಾದರೂ ಅದು ಆಮೆಗತಿಯಲ್ಲಿ ನಡೆದಿದೆ. ಕಾಮಗಾರಿ ವೀಕ್ಷಣೆಗೆ ಸಂಬಂಧಪಟ್ಟ ಮೇಲ್ವಿಚಾರಕರೇ ಇರದೇ ಕೇವಲ ಕೆಲಸಗಾರರು ಮಾತ್ರ ಇರುತ್ತಾರೆ. ಹೀಗಾಗಿ ವರ್ಷದಲ್ಲಿ ಸುಮಾರು ಹತ್ತಾರು ಜನರಿಗೆ ಅನಾಹುತಗಳು ಸಂಭವಿಸಿವೆ. ಮೂವರು ಸಾವನ್ನಪ್ಪಿದ್ದಾರೆ. ಗುತ್ತಿಗೆದಾರರು ಕಾಮಗಾರಿಯನ್ನು ಆದಷ್ಟು ಬೇಗ ಮಾಡಿ ಮುಗಿಸುವ ಹಾಗೂ ಸುರಕ್ಷತೆಗೆ ಗಮನ ನೀಡಿ ಸಂಬಂಧಪಟ್ಟ ಮೇಲ್ವಿಚಾರಕರ ನಿರ್ವಹಣೆಯಲ್ಲಿ ಕಾಮಗಾರಿ ನಡೆಯಬೇಕು. ಬೇಜವಾಬ್ದಾರಿಯಿಂದಲೇ ಇಂದು ಕಬ್ಬಿಣದ ಹಳೆಯ ವಿದ್ಯತ್ ಕಂಬ ಬಿದ್ದಿದೆ. ಸಾರ್ವಜನಿಕರು ಹೇಳಿದರೂ ಕೆಲಸಾರರು ಕೇಳಲಿಲ್ಲ. ಹಳೆಯ ಕಂಬದ ವಿದ್ಯತ್ ತಂತಿ ಕಟ್ ಮಾಡುತ್ತಿದ್ದಂತೆಯೇ ಕಂಬ ಆಯ ತಪ್ಪಿ ಬಿದ್ದಿತು. ಸಾರ್ವಜನಿಕರನ್ನು ಸ್ಥಳದಿಂದ ಓಡಿಸಿದ್ದರಿಂದ ಕಂಬದ ಮೇಲಿದ್ದ ಇಬ್ಬರು ಕೆಲಸಗಾರರಿಗೆ ಕಂಬದ ಕೆಳಗೆ ಬಿದ್ದಾಗ ಗಾಯಗಳಾದವು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಆಗ್ರಹ: ಸಂಬಂಧಪಟ್ಟ ಗುತ್ತಿಗೆದಾರರು ಉತ್ತಮ ಮೇಲ್ವಿಚಾರಕರನ್ನು ನೇಮಿಸಿ ಕಾಮಗಾರಿಯನ್ನು ಮುಂದುವರೆಸಲಿ. ಕೇವಲ ಕೆಲಸಗಾರರನ್ನು ಬಿಟ್ಟು ಕೆಲಸ ಮಾಡಿಸುತ್ತಿರುವುದರಿಂದ ಇಂದು ಹತ್ತಾರು ಜನರ ಪ್ರಾಣವೇ ಹೋಗುತ್ತಿತ್ತು. ತಕ್ಷಣ ಮಾಹಿತಿ ಕೊಟ್ಟಿದ್ದರಿಂದ ಸಾರ್ವಜನಿಕರು ಸ್ಥಳದಿಂದ ಸರಿದರು. ಇದನ್ನು ಇಲಾಖೆ ಮತ್ತು ಗುತ್ತಿಗೆದಾರರು ಗಂಭೀರವಾಗಿ ಪರಿಗಣಿಸಿ, ಕಾಮಗಾರಿಒಯನ್ನು ಬೇಗನೇ ಮುಗಿಸಬೇಕು. ಇನ್ನು ಮುಂದೆ ಇಂತಹ ಅನಾಹುತಗಳು ಜರುಗದಂತೆ ಕ್ರಮವಹಿಸಬೇಕೆಂದು ಘಟನಾ ಸ್ಥಳದಲ್ಲಿದ್ದ ಬಿಜೆಪಿ ಮುಖಂಡ ರಾಜು ಚಿತ್ತರಗಿ, ಅಲ್ಲಿನ ವ್ಯಾಪಾರಸ್ಥರಾದ ಮೋಹನ ಧೊಂಗಡೆ, ಭೀಮಶಿ ಹೊಸಮನಿ, ಶೇಖರ ಹಿಪ್ಪರಗಿ, ಬಸು ಸೂಡಿ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.