ಕಾಗವಾಡ

ಸಮಾನತೆಯ ಅಸ್ತಿತ್ವದ ಹುಡುಕಾಟವೇ ‘ಕುರುಡು ಕಾಂಚಾಣ’ ಕವಿತೆ: ಡಾ.ಹೊಂಬಯ್ಯ ಹೊನ್ನಲಗೆರೆ

ಸಮಾನತೆಯ ಅಸ್ತಿತ್ವದ ಹುಡುಕಾಟವೇ ‘ಕುರುಡು ಕಾಂಚಾಣ’ ಕವಿತೆ: ಡಾ.ಹೊಂಬಯ್ಯ ಹೊನ್ನಲಗೆರೆ

ಕಾಗವಾಡ 19: ಕನ್ನಡ ಸಾಹಿತ್ಯದ ವರಕವಿ ಎಂದೇ ಪ್ರಸಿದ್ದರಾದ ದ.ರಾ. ಬೇಂದ್ರೆ ಅವರು, ನೊಂದು ಬೆಂದು ಬೇಂದ್ರೆಯಾದವರು. ಬಡತನದಲ್ಲಿ ಹುಟ್ಟಿ ತನ್ನ ಅಸ್ತಿತ್ವಕ್ಕಾಗಿ ಹುಡುಕಾಡಿದವರು. ಈ ನೆಲೆಯಲ್ಲಿ ಕುರುಡು ಕಾಂಚಾಣ ಪದ್ಯವು ಸಮಾನತೆಯ ಅಸ್ತಿತ್ವದ ಹುಡುಕಾಟದ ಆಶಯವನ್ನು ಬಿಂಬಿಸುವ ಒಂದು ಪ್ರಮುಖ ಪದ್ಯವಾಗಿದೆ ಎಂದು ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಅಭಿಪ್ರಾಯಪಟ್ಟರು. 

ದಿ. 19 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗವು ಹಮ್ಮಿಕೊಂಡಿದ್ದ ಅಧ್ಯಾಪಕರ ವಿನಿಮಯ ಕಾರ್ಯಕ್ರಮದ ಅಂಗವಾಗಿ ಏರಿ​‍್ಡಸಿದ್ದ ದ.ರಾ. ಬೇಂದ್ರೆ ಅವರ ಕುರುಡು ಕಾಂಚಾಣ ಕವಿತೆಯ ಪ್ರಾಯೋಗಿಕ ವಿಮರ್ಶೆ ಕುರಿತು ಉಪನ್ಯಾಸ ನೀಡುತ್ತಾ, ಮಾತನಾಡುತ್ತಿದ್ದರು. ಕುರುಡು ಕಾಂಚಾಣ ಕವಿತೆಯು ಸರ್ವರ ಒಳಿತಿಗಾಗಿ ಮತ್ತು ಸರ್ವರ ಹೇಳಿಕೆಗಾಗಿ ಅದರಲ್ಲೂ ಶೋಷಿತರ ಪರವಾಗಿ ನಿಲ್ಲುವ ಕವಿತೆಯಾಗಿದ್ದು, ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ಕುರುಡು ಕಾಂಚಾಣ ಎಂದು ಕರೆದಿದ್ದಾರೆ ಎಂದರು.  

ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್‌.ಎ. ಕರ್ಕಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಜ್ಞಾನ ಮತ್ತು ಬೋಧನೆ ವಿಭಿನ್ನ ಮಾದರಿಗಳನ್ನು ಪರಿಚಯಿಸುವುದು ಅಧ್ಯಾಪಕರ ವಿನಿಮಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು. 

ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ.ಬಿ.ಡಿ. ಧಾಮಣ್ಣನವರ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎ.ಎಂ. ಜಕ್ಕಣ್ಣವರ ಪ್ರೊ.ಎಸ್‌.ಎಸ್‌. ಮೋರೆ, ಪ್ರೊ.ಪಿ.ಪಿ. ಪವಾರ, ಡಾ.ಅಮೋಲ್ ಪಾಟೀಲ, ಡಾ. ಚಂದ್ರಶೇಖರ, ಪ್ರೊ. ಪಟ್ಟಣಶೆಟ್ಟಿ ಹಾಗೂ ಪ್ರಥಮ ಬಿ.ಕಾಂ, ಬಿ.ಎಸ್ಸಿ, ಮತ್ತು ಬಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ