ಗುಳೇಗುಡ್ಡ

ಅಣಕು ಶವ ಯಾತ್ರೆ ಈ ಬಾರಿ ರದ್ದು : ಪಿಎಸೈ ಪಟಾತರ

ಅಣಕು ಶವ ಯಾತ್ರೆ ಈ ಬಾರಿ ರದ್ದು : ಪಿಎಸೈ ಪಟಾತರ
ಪಿಎಸೈ ಪಿಎಂ ಪಟಾತರ ಮಾತನಾಡಿದರು.

ಗುಳೇದಗುಡ್ಡ 26: ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುವುದರಿಂದ ಈ ಬಾರಿ ಹೋಳಿ ಹಬ್ಬವನ್ನು ಸರಳವಾಗಿ ಆಚರಿಸುವುದಲ್ಲದೇ ಅಣಕು ಶವಯಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಪಿಎಸೈ ಪಿ.ಎಂ.ಪಟಾತರ ಹೇಳಿದರು.

ಅವರು ಗುರುವಾರ ಸಾಯಂಕಾಲ ಹೋಳಿ ಹಬ್ಬದ ನಿಮಿತ್ಯ ಪೋಲೀಸ್ ಠಾಣೆಯಲ್ಲಿ ಜರುಗಿದ ಶಾಂತಿ ಪಾಲನಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಾಮದಹನದ ಮರುದಿನ ಪಟ್ಟಣದಲ್ಲಿ ಅತ್ಯಂತ ಪ್ರಸಿದ್ಧ ಅಣಕು ಶವ ಯಾತ್ರೆಯ ಕಲೆಯನ್ನು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪ್ರದರ್ಶನ ರದ್ದುಪಡಿಸಲಾಗಿದೆ. ನೂರಾರು ಸಂಖ್ಯೆಯಲ್ಲಿ ಇದನ್ನು ನೋಡಲು ಜನ ರಸ್ತೆ ಮೇಲೆ ಸೇರುತ್ತಾರೆ. ಹಾಗೆ ಸೇರದಂತೆ ಕ್ರಮಕೈಗೊಳ್ಳಲು ಈ ಬಾರಿ ಅಣಕು ಶವಯಾತ್ರೆಯನ್ನೇ ಜಿಲ್ಲಧಿಕಾರಿಗಳ ಆದೇಶ ಮೇರೆಗೆ ರದ್ದುಪಡಿಸಲಾಗಿದೆ. ಈ ಸಲ ಹೋಳಿ ಹಬ್ಬವನ್ನು ಶಾಂತಿ, ಸುವ್ಯವಸ್ಥೆಯಿಂದ ಸಾರ್ವಜನಿಕರು ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗುವಂತಿಲ್ಲ. ಎಲ್ಲ ಸಮಾಜ, ಧರ್ಮಗಳ ಮುಖಂಡರು, ಪುರಸಭೆ ಸದಸ್ಯರು ತಮ್ಮ ವಾರ್ಡ್‍ಗಳ ಯುವಕರಿಗೆ ಈ ಮಾಹಿತಿಯನ್ನು ನೀಡಬೇಕು. ಹೋಳಿಹಬ್ಬದ ಮುಖ್ಯ ಉದ್ದೇಶವನ್ನು ನಾವೆಲ್ಲ ಎತ್ತಿ ಹಿಡಿಯಬೇಕಾಗಿದೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ  ಹಬ್ಬ ಆಚರಿಸಬೇಕಾಗಿದೆ. ಪರಸ್ಪರರಿಗೆ ರಾಸಾಯನಿಕ ಮಿಶ್ರಿತವಲ್ಲದ ಬಣ್ಣವನ್ನು ಅವರಿಚ್ಚೆ ಇಲ್ಲದೇ ಒತ್ತಾಯದಿಂದ ಹಚ್ಚುವಂತಿಲ್ಲ. ತಮ್ಮ ತಮ್ಮ ವಾರ್ಡ್‍ಗಳಲ್ಲಿಯೇ ಬಣ್ಣದಾಟ ಆಡಬೇಕು.ಸಾಮಾಜಿಕ ಅಂತರ ಕಾಯ್ದುಕೊಂಡು ಕಾಮದಹನ ಮತ್ತು ಬಣ್ಣದಾಟವನ್ನು ಆಡಬೇಕು. ಕಾಮದಹನಕ್ಕೆ ಸಾರ್ವಜನಿಕರ ಬೆಲೆಬಾಳುವ ಅಗತ್ಯದ ಕಟ್ಟಿಗೆ ಕಳ್ಳತನ ಮಾಡುವುದು ಸರಿಯಲ್ಲ ಎಂದರು.

ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ ಮಾತನಾಡಿ, ಈ ಬಾರಿ ಶನಿವಾರ ದಿ.27 ರಂದು ಕಾಮದಹನ, ಭಾನುವಾರ ದಿ.28 ರಂದು ಬಣ್ಣ ಇರುವುದರಿಂದ ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಯ್ದುಕೊಂಡು ಹೋಳಿ ಹಬ್ಬವನ್ನು ಆಚರಿಸಬೇಕು. ಈ ಹಬ್ಬ ಭಾವೈಕ್ಯತೆಯ ಸಂಕೇತವಾಗಲಿ. ಮಕ್ಕಳ ಕೈಗೆ ಅಪಾಯಕಾರಕ ರಾಸಾಯನಿಕ ಬಣ್ಣ ಕೊಡಬೇಡಿ. ಕೋರೊನಾ ಮಹಾಮಾರಿ ಮತ್ತೇ ಜನರ ಹತ್ತಿರ ಬಾರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬ ಆಚರಿಸಿರಿ ಎಂದರು. ಪುರಸಭೆ ಸದಸ್ಯ ಅಂಬರೀಶ ಕವಡಿಮಟ್ಟಿ ಅಣಕು ಶವಯಾತ್ರೆಗೆ ಅನುಮತಿ ನೀಡುವಂತೆ, ಹೋಳಿ ಹಬ್ಬದಲ್ಲಿ ಮಧ್ಯ ಮಾರಾಟದ ಮೇಲೆ ನಿಯಂತ್ರಣ ಹಾಕುವಂತೆ ಮುಬಾರಕ ಮಂಗಳೂರ ಪಿಎಸೈ ಅವರಲ್ಲಿ ಮನವಿ ಮಾಡಿಕೊಂಡರು.

ಉಪತಹಸೀಲ್ದಾರ್ ವಿ.ವೈ.ಬಡಿಗೇರ ಉಪಸ್ಥಿತರಿದ್ದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ರಫೀಕ್ ಕಲ್ಬುರ್ಗಿ, ಸಂತೋಷ ನಾಯನೇಗಲಿ, ಯಲ್ಲಪ್ಪ ಮನ್ನಿಕಟ್ಟಿ, ವಿನೋದ ಮದ್ದಾನಿ, ಅಂಬರೀಶ ಕವಡಿಮಟ್ಟಿ, ಮುಖಂಡರಾದ ಪ್ರಕಾಶ ಮುರಗೋಡ, ಸುಧೀರ ಗುಡ್ಡದ,  ಭುನವೇಶ ಪೂಜಾರ, ಸಲೀಮ್ ಮೋಮಿನ್, ಮುಬಾರಕ ಮಂಗಳೂರ ಸೇರಿದಂತೆ ಪಟ್ಟಣದ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ಸುದ್ದಿ ಓದಿ