ಕಾಗವಾಡ

ನೂತನ ಸಮುದಾಯ ಭವನ ಉದ್ಘಾಟನೆ

ನೂತನ ಸಮುದಾಯ ಭವನ ಉದ್ಘಾಟನೆ
ಶೇಡಬಾಳ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡಕರ ಪ್ರತಿಮೆಗೆ ಹೂಮಾಲೆ ಹಾಕಿ ಪೂಜೆ ಸಲ್ಲಿಸುತ್ತಿರುವ ಚಿತ್ರ.

ಶೇಡಬಾಳ14:  ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ  ಅವರು ಅಸ್ಪೃಶ್ಯತೆ ವಿರುದ್ಧ  ಹಾಗೂ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕರಾಗಿದ್ದರು ಎಂದು ಕವಲಗುಡ್ಡ ಹಣಮಾಪೂರ ಸಿದ್ಧ ಸಂಸ್ಥಾನ ಮಠದ ಪ.ಪೂ.  ಅಮರೇಶ್ವರ ಮಹಾರಾಜರು ಹೇಳಿದರು.

ಶೇಡಬಾಳ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ  ಅವರ 130 ನೇ ಜನ್ಮ ಜಯಂತಿ ಅಂಗವಾಗಿ ವಾರ್ಡ್ ನಂ. 10 ರಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಮುದಾಯ ಭವನ, ಉದ್ಯಾನವನ ಹಾಗೂ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದರು. 

ಮಹಾನ್ ಮಾನವತಾವಾದಿಯಾಗಿರುವ ಅಂಬೇಡ್ಕರ ಅವರು ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು.

ಶತ ಶತಮಾನಗಳಿಂದ ಶಾಪಕ್ಕೆ ಒಳಗಾಗಿದ್ದ ದಲಿತರನ್ನು ಶಾಪ ಮುಕ್ತರನ್ನಾಗಿಸಲು ಡಾ. ಅಂಬೇಡ್ಕರ  ಹುಟ್ಟಿ ಬರಬೇಕಾಯಿತು ಎಂದು ಹೇಳಿದ ಸ್ವಾಮಿಜಿ, ಹುಟ್ಟು ಬಡತನವಾದರೂ ಬದುಕು ಶ್ರೀಮಂತಿಕೆಯಿಂದ ಕೂಡಿರಲಿ ಎಂಬ ಉದ್ದೇಶ ಹೊಂದಿದ್ದರು. ದಲಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕಾಳಜಿ ಅವರದ್ದಾಗಿತ್ತು. ಆ ಮಹಾನ್ ನಾಯಕನ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾರ್ಥಕಗೊಳಿಸಿಕೊಳ್ಳುವಂತೆ ಸ್ವಾಮಿಜಿಯವರು ಕರೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಸಂಜಯ ಕುರಣೆ, ಆರ್.ಜೆ.ಕಟ್ಟಿ, ಸಂಜಯ ತಳವಳಕರ ಮೊದಲಾದವರು ಅಂಬೇಡ್ಕರ  ಜೀವನ ಚರಿತ್ರೆ ಕುರಿತು ವಿವರವಾಗಿ ಮಾತನಾಡಿದರು.

ಡಾ. ಬಿ.ಆರ್. ಅಂಬೇಡಕರ ಅವರ 130 ನೇ ಜನ್ಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಅಂಬೇಡಕರ ಭಾವಚಿತ್ರದ ಭವ್ಯ ಮೆರವಣಿಗೆ ಮಾಡಲಾಯಿತು.

ಈ ಸಮಯದಲ್ಲಿ ಪಪಂ ಅಧ್ಯಕ್ಷ ರವೀಂದ್ರ ಕಾಂಬಳೆ, ಮಾಜಿ ಅಧ್ಯಕ್ಷೆ ಆಕಾಶನಿ ಕಾಂಬಳೆ, ಶ್ರೀನಿವಾಸ ಕಾಂಬಳೆ, ಸುಭಾಷ ಢಾಲೆ, ರಮೇಶ ಚೌಗಲಾ, ಭರತೇಶ ಪಾಟೀಲ, ವಿನೋದ ಬರಗಾಲೆ, ಪಪಂ ಸದಸ್ಯ ಪ್ರಕಾಶ ಮಾಳಿ, ಉದಯ ಖೋಡೆ, ಶ್ರಾವಣ ಕಾಂಬಳೆ,  ಶಶಿ ಸಾಳವೆ, ವಿಜಯ ಕಾಂಬಳೆ, ಸುನೀಲ ಕಾಳೆ ಸೇರಿದಂತೆ ಅನೇಕ ದಲಿತ ಮುಖಂಡರು, ಗ್ರಾಮಸ್ಥರು ಇದ್ದರು.

ಸುದ್ದಿ ಓದಿ