ಮಡ್ಡಿ ಮಹಾಲಕ್ಷ್ಮೀ ದೇವಸ್ಥಾನದ ಸಮುದಾಯ ಭವನದ ಉದ್ಘಾಟನೆ
ಲೋಕದರ್ಶನ ವರದಿ
ಕಾಗವಾಡ 07: ತಾಲೂಕಿನ ಐನಾಪುರ ಪಟ್ಟಣದ ಶ್ರೀಗುಡ್ಡದ ಮಡ್ಡಿ ಮಹಾಲಕ್ಷ್ಮೀ ದೇವಸ್ಥಾನದ ಸಮುದಾಯ ಭವನದ ಉದ್ಘಾಟನೆ ಹಾಗೂ ವಾಸ್ತುಶಾಂತಿ ಕಾರ್ಯಕ್ರಮ ಐನಾಪುರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ಹಾಗೂ ಮದಭಾವಿ ಶನೇಶ್ವರ ಮಂದಿರದ ಎಸ್. ಪ್ರವೀಣಶಾಸ್ತ್ರೀ ಹಿರೇಮಠ ಇವರ ಸಾನ್ನಿಧ್ಯದಲ್ಲಿ ನೆರವೇರಿತು.
ರವಿವಾರ ದಿ. 7ರಂದು ಶ್ರೀಗುಡ್ಡದ ಮಡ್ಡಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೇವಾ ಸಮಿತಿ ವತಿಯಿಂದ ನಿರ್ಮಿಸಿದ ಸಮುದಾಯ ಭವನವನ್ನು ಸದ್ಭಕ್ತರು ದಾನ ರೂಪದಲ್ಲಿ ನೀಡಿದ ಒಂತಿಗೆ ಹಣ ಹಾಗೂ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಿರುವ ಅನುದಾನ ಬಳಿಸಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸಿದ ಸುಸಜ್ಜೀತ ಭವನದ ಉದ್ಘಾಟನೆ ನೆರವೇರಿತು.
ದಿವ್ಯಸಾನಿಧ್ಯವನ್ನು ಐನಾಪುರ ಗುರುದೇವಾಶ್ರಮದ ಬಸವೇಶ್ವರ ಮಹಾಸ್ವಾಮಿಜಿ ವಹಿಸಿ ಮಾತನಾಡುವಾಗ, ದೇವಸ್ಥಾನ ಒಂದು ಪವಿತ್ರ ಸ್ಥಾನ. ಇಲ್ಲಿಗೆ ಬಂದು ಸ್ವಲ್ಪ ಸಮಯ ದೇವರಿಗೆ ಭಕ್ತಿ ಸಲ್ಲಿಸಿ ನೆಮ್ಮದಿಯಿಂದ ಸ್ವಲ್ಪ ಸಮಯ ಕಳೆದು ತನ್ನ ಪ್ರಪಂಚದ ತಾಪತ್ರಿಯಿಂದ ದೂರುಳಿದು ಭಕ್ತಿ ಮಾಡಬೇಕು. ಎಲ್ಲಿ ಸ್ವಚ್ಚತೆ ಇರುತ್ತದೆಯೋ ಅಲ್ಲಿ ದೇವರು ನೆಲಸಿರುತ್ತಾನೆ. ಅದಕ್ಕಾಗಿ ಪ್ರತಿಯೊಬ್ಬರು ಗಿಡ, ಮರಗಳನ್ನು ನೆಟ್ಟು ಪರಿಸರವನ್ನು ಸ್ವಚ್ಚಂದವಾಗಿಟ್ಟುಕೊಳ್ಳಬೇಕು. ಈ ದೇವಾಲಯದ ಸುತ್ತಮುತ್ತ ಎಷ್ಟೊಂದು ಮರಗಳನ್ನು ನೆಟ್ಟಿದ್ದಾರೆ. ಇಂಥ ಪವಿತ್ರವಾದ ಸ್ಥಳದಲ್ಲಿ ದೇವರು ವಾಸವಾಗಿರುತ್ತಾನೆ ಎಂದು ನುಡಿದರು.
ದಾನಶೂರ ಕರ್ಣವೆಂದು ಖ್ಯಾತಿ ಪಡೆದಿರುವ ಸಾಮಾಜಿಕ ಕಾರ್ಯಕರ್ತರಾದ ಮಹಾವೀರ ಪಡನಾಡ ಮಾತನಾಡುವಾಗ, ಮನುಷ್ಯ ಈ ಭೂಮಿಯ ಮೇಲೆ ಜನ್ಮ ತಾಳಿದ ಮೇಲೆ ಪ್ರತಿಯೊಬ್ಬರು ತಮ್ಮ ತಮ್ಮ ಕಾಯಕದಲ್ಲಿ ನಿರತಾಗಿ ಸಂಪತ್ತನ್ನು ಗಳಿಸುತ್ತಾರೆ. ಗಳಿಸಿದ ಸಂಪತ್ತನ್ನು ತನ್ನ ಸ್ವಾರ್ಥಕ್ಕಾಗಿ ಬಳಸದೆ ಅಲ್ಪ ಭಾಗವಾದರೂ ಸಮಾಜಕ್ಕಾಗಿ ವಿನಿಯೋಗಿಸಬೇಕು. ಅಲ್ಲಿ ಸಿಗುವ ನೆಮ್ಮದಿ ಮತ್ತಾವುದರಲ್ಲೂ ಸಿಗುವುದಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರಾಜು ಕಾಗೆ ಆಗಮಿಸಿ ಸಮುದಾಯ ಭವನ ಕಟ್ಟಡವನ್ನು ವೀಕ್ಷಿಸಿದರು. ಅವರಿಗೆ ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಾನಿಧ್ಯವನ್ನು ಮದಭಾವಿ ಶನೇಶ್ವರ ದೇವಾಲಯದ ಪುರೋಹಿತ ರತ್ನಶ್ರೀ ಪ್ರವೀಣ ಶಾಸ್ತ್ರೀ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು.
ಸಮುದಾಯ ಭವನ ನಿರ್ಮಿಸಲು ಐನಾಪುರ ಪಟ್ಟಣ ಪಂಚಾಯತಿಯ ಅಧ್ಯಕ್ಷ ದಿವಂಗತ. ರವೀಂದ್ರ ಗಾಣಿಗೇರ ಇವರು ವಿಶೇಷ ಪ್ರಯತ್ನಿಸಿದ್ದರು ಎಂದು ಹೇಳಿ ಕಾರ್ಯಕ್ರಮದಲ್ಲಿ ಅವರ ಸೇವೆ ಸ್ಮರಿಸಿದರು.