ಮನೆ ಮನೆಗೂ ಗಂಗೆ ಯೋಜನೆ ಕಾಮಗಾರಿಗೆ ಚಾಲನೆ
ಬ್ಯಾಡಗಿ: ಗ್ರಾಮೀಣ ಪ್ರದೇಶದಲ್ಲಿರುವ ಅಸಮರ್ಕ ನೀರು ಪೂರೈಕೆಯಲ್ಲಿ ಸುಧಾರಣೆ ತರುವ ವಿಶ್ವಾಸವನ್ನು ‘ಜಲಜೀವನ್ ಮಿಷನ್’ ಹಾಗೂ ಮನೆ ಮನೆಗೂ ಗಂಗೆ ಯೋಜನೆಯು ಮೂಡಿಸಿದ್ದು, ಪ್ರತಿ ಮನೆಗೂ ಪ್ರತ್ಯೇಕ ನಳ ಸಂಪರ್ಕ ಕಲ್ಪಿಸಿ ನಿರಂತರ ಶುದ್ಧ ಕುಡಿಯುವ ನೀರು ಪೂರೈಸುವುದು ಇದರ ಉದ್ದೇಶವಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು. ತಾಲೂಕಿನ ಕಲ್ಲೇದೇವರು ಗ್ರಾಮದ ಸೇವಾನಗರ ತಾಂಡಾದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಮನೆ ಮನೆಗೂ ಗಂಗೆ ಯೋಜನೆಯಡಿ ಕೈಗೆತ್ತಿಕೊಂಡಿರುವ 68ಲಕ್ಷ ರೂಗಳ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೂ ನಿತ್ಯ ಸರಾಸರಿ 55 ಲೀಟರ್ ನೀರಿನ ಅಗತ್ಯವಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದ್ದು, ನಿತ್ಯವೂ ಇಷ್ಟೇ ಪ್ರಮಾಣದ ನೀರನ್ನು ಪೂರೈಕೆ ಮಾಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದೆ. ಎಚ್ಡಿಪಿಇ ಪೈಪ್ ಮೂಲಕ ಸಂಪರ್ಕ ಕಲ್ಪಿಸುವುದರಿಂದ ನೀರು ಪೋಲಾಗುವುದಿಲ್ಲ. ಎಲ್ಲ ಮನೆಗೂ ಸಮ ಪ್ರಮಾಣದಲ್ಲಿ ನೀರು ಹಂಚಿಕೆ, ಸರಬರಾಜು ಮಾಡಲಾಗುತ್ತದೆ ಎಂದರು.ಎಇಇ ಸುರೇಶ ಬೇಡರ ಮಾತನಾಡಿ, ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ 42.5, ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಲ್ಲಿ ಶೇ 5 ಅನುದಾನ ನೀಡಲಾಗುತ್ತಿದೆ. ಉಳಿದ ಶೇ 10ರಷ್ಟು ವೆಚ್ಚವನ್ನು ಬಳಕೆದಾರರಿಂದ ಸಮುದಾಯ ವಂತಿಕೆ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ.
ಸಮುದಾಯದ ಸಹಭಾಗಿತ್ವ ಪಡೆಯುವ ಹಾಗೂ ಪ್ರತಿಯೊಬ್ಬರಿಗೂ ಜಲದ ಪ್ರಾಮುಖ್ಯತೆಯ ಹೊಣೆಗಾರಿಕೆ ನಿಗದಿಪಡಿಸಲು ವಂತಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಸದಸ್ಯ ವೀರಣ್ಣ ಹಿರೇಮಠ ವಹಿಸಿದ್ದರು. ಮುಖಂಡರಾದ ಶಂಕ್ರ್ಪ ಮಾತನವರ, ಸುರೇಶ ಯತ್ನಳ್ಳಿ, ಶಿವಬಸಪ್ಪ ಕುಳೆನೂರ, ಎಚ್.ಡಿ.ಲಮಾಣಿ, ತುಕ್ಕಪ್ಪ ಲಮಾಣಿ, ಕಲ್ಲಪ್ಪ ಲಮಾಣಿ, ಬಸವರಾಜ ದಾನಣ್ಣನವರ, ಇಂಜನೀಯರ ವೈ.ಕೆ.ಮೆಟಗಾರ, ಪಿಡಿಓ ಮಲ್ಲೇಶ ಮೋಟೆನವರ, ರಾಮಣ್ಣ ಗಾಜೇರ, ಗುತ್ತಿಗೆದಾರ ತಿಮ್ಮಣ್ಣ ವಡ್ಡರ, ಬಸವಣ್ಣೆಪ್ಪ ಹೊಸಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.