ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿದ್ಯಾರ್ಥಿ ಶಿಷ್ಯ ವೇತನ
ಬ್ಯಾಡಗಿ 02: ಸುಜ್ಞಾನ ನಿಧಿ ಶಿಷ್ಯವೇತನಮೂಲಕ ವಿದ್ಯಾರ್ಥಿನಿಯರ ಸೇರಿದಂತೆ ಎಲ್ಲ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ ಎಂದು ಪತ್ರಕರ್ತ ಬಸವಂತಪ್ಪ ಹುಲ್ಲತ್ತಿ ಹೇಳಿದರು.ಪಟ್ಟಣದ ಧರ್ಮಸ್ಥಳ ಯೋಜನಾ ಕಚೇರಿಯ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮುಂಜೂರಾತಿ ಪತ್ರ ವಿತರಸಿ ಮಾತನಾಡಿದರು.ಸರ್ಕಾರ ಮಾಡುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಬಡವರಿಗೆ ಉನ್ನತ ಶಿಕ್ಷಣ ಪಡೆಯುವುದು ಇಂದು ದುಬಾರಿಯಾಗಿದೆ.
ಇದನ್ನು ಗಮನದಲ್ಲಿರಿಸಿಕೊಂಡು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾಕಷ್ಟು ಯೋಜನೆಗಳನ್ನು ನೀಡುತ್ತಿದೆ. ಶಿಕ್ಷಣದಿಂದ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಿದ್ದು,
ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸಬೇಕೆಂದರು. ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿಗ್ರಾಮೀಣ ಬಡ ಮಕ್ಕಳ ವಿದ್ಯಾರ್ಜನೆಗೆ ಸುಜ್ಞಾನ ನಿಧಿ ಶಿಷ್ಯವೇತನ ಸಹಕಾರಿಯಾಗಲಿದೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನಿರಂತರವಾಗಿ ನೀಡುತ್ತಿದ್ದು, ಇದರಿಂದ ಜನಸಾಮಾನ್ಯರು ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಎಂದರು.