ಅನುದಾನದ ಸದ್ಬಳಿಕೆಯಾಗದೇ ಅಥಣಿ ಅಭಿವೃದ್ಧಿಯಾಗಿಲ್ಲ
ಆಮ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರಾವ್ ಹೇಳಿಕೆ: ಆಪ್ ಕಾರ್ಯಕರ್ತರ ಸಭೆ
ಅಥಣಿ 17: ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನದ ಸದ್ಬಳಿಕೆಯಾಗದೇ ಅಥಣಿ ಅಭಿವೃದ್ಧಿಯಾಗಿಲ್ಲ, ಅಥಣಿ ಜನತೆ ಇಷ್ಟು ವರ್ಷ ಆಡಳಿತ ನಡೆಸಿದವರ ಬಗೆಗೆ ಯೋಚಿಸಬೇಕು ಎಂದು ಆಮ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರಾವ್ ಹೇಳಿದರು.
ಅವರು ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆಮ ಆದ್ಮಿ ಪಾರ್ಟಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ರಾಜ್ಯ ಹಾಗೂ ಕೇಂದ್ರದಿಂದ ಅಥಣಿ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ ಆದರೆ ಅಥಣಿ ಕೆಲ ದಶಕಗಳ ಹಿಂದೆ ಹೇಗೆ ಇತ್ತೊ ಹಾಗೆಯೇ ಇದೆ ಯಾವುದೇ ಬದಲಾವಣೆ ಇಲ್ಲ. ಕೆಲ ಅನುದಾನ ಬಳಸಿ ಅಲ್ಲಿ ಇಲ್ಲಿ ರಸ್ತೆ ಮಾಡಿರುವುದನ್ನು ಹೊರತು ಪಡಿಸಿ ಬೇರೆ ಯಾವುದೇ ಅಭಿವೃದ್ಧಿ ಆಗಿಲ್ಲ. ಪಟ್ಟಣದ ಮಧ್ಯ ಭಾಗದಲ್ಲಿರುವ ಕೆರೆ, ಕಾಯಿಪಲ್ಲೆ ಪೇಟೆ ದಶಕಗಳಿಂದಲೂ ಅಭಿವೃದ್ಧಿ ಆಗಿಲ್ಲ ಎಂದಾದರೆ ಬಿಡುಗಡೆಯಾದ ಅನುದಾನವಾದರೂ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.
ಅಥಣಿ ಅಷ್ಟೇ ಅಲ್ಲ ಉತ್ತರ ಕರ್ನಾಟಕದ ಯಾವ ಪ್ರದೇಶವೂ ಕೂಡ ಹೊಂದ ಬೇಕಾದಷ್ಟು ಅಭಿವೃದ್ಧಿ ಹೊಂದಿಲ್ಲ ಆದರೆ ಈ ಭಾಗದ ಜನಪ್ರತಿನಿಧಿಗಳು ಮಾತ್ರ ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ ಇದಕ್ಕೆ ಉತ್ತಮ ಉಧಾರಣೆ ಎಂದರೆ ಈ ಶಾಸಕರ, ಸಂಸದರ ಬೆಂಗಳೂರಿನಲ್ಲಿರುವ ಅರಮನೆಗಳೇ ಸಾಕು ಎಂದರು. ಈ ಅರಮನೆಗಳಲ್ಲಿ ಅವರು ಸಾಕಿದ ಮುದ್ದಿನ ನಾಯಿಗಳಿಗೂ ಕೂಡ ಹವಾ ನಿಯಂತ್ರಿತ ಕೊಠಡಿಗಳಿವೆ ಆದರೆ ಅವರವರ ಕ್ಷೇತ್ರಗಳ ಜನತೆ ಮಾತ್ರ ನರಕ ಯಾತನೆ ಅನುಭವಿಸುತ್ತಿರುವುದು ವಿಷಾದದ ಸಂಗತಿ ಎಂದ ಅವರು ನಮ್ಮ ಪಾರ್ಟಿಯಲ್ಲಿ ಸಾಮಾನ್ಯ ಅತೀ ಸಾಮಾನ್ಯರನ್ನು ಗೌರವಿಸಿ ಅವರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಟಿಕೇಟ್ ಕೊಡುತ್ತಿದ್ದೇವೆ ಇದಕ್ಕೆ ಪಂಜಾಬ ಮತ್ತು ದೇಹಲಿ ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳೇ ಸಾಕ್ಷಿ ಎಂದರು.
ರಾಜ್ಯದಲ್ಲಿಯೂ ಕಾಂಗ್ರೆಸ್, ಜನತಾ ದಳ, ಬಿಜೆಪಿ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ ಈ ಎಲ್ಲ ಪಕ್ಷಗಳು ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿ ಅಧಿಕಾರ ಕಳೆದುಕೊಂಡ ನಂತರ ಪ್ರಾಮಾಣಿಕರಾಗಿದ್ದೇವೆ ಎಂದು ಜನರ ಮುಂದೆ ಬಿಂಬಿಸಿಕೊಳ್ಳುತ್ತಿವೆ. ಜನರಿಗೆ ಈ ಮೂರೇ ಪಕ್ಷಗಳನ್ನು ಅವಲಂಬಿಸಬೇಕಿತ್ತು ಈಗ ಇಡೀ ದೇಶದಲ್ಲಿ ಕೆಲವೇ ವರ್ಷಗಳಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ ಆದ್ಮಿ ಪಾರ್ಟಿ ಹುಟ್ಟಿಕೊಂಡ ನಂತರ ಜನರ ಆಯ್ಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ಪಡೆದುಕೊಂಡಿದೆ ಎಂದ ಅವರು ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ಆಮ ಆದ್ಮಿ ಪಾರ್ಟಿ ಅಭ್ಯರ್ಥಿಗಳಿಗೆ ಮತ ನೀಡುವುದು ನಿಶ್ಚಿತ ಮತ್ತು ರಾಜ್ಯದಲ್ಲಿಯೂ ಆಮ ಆದ್ಮಿ ಪಾರ್ಟಿಯ ಆಡಳಿತ ಬರುವುದು ಕೂಡ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಮ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ತಕುಮಾರ ಶೆಟ್ಟಿ ಮಾತನಾಡಿ, ಕಾಗವಾಡ ಹಾಗೂ ಅಥಣಿ ಮತಕ್ಷೇತ್ರದಲ್ಲಿ ನೀರಾವರಿ ಒದಗಿಸುವ ಖಿಳೇಗಾಂವ ಬಸವೇಶ್ವರ ಹಾಗೂ ಅಥಣಿ ಮತಕ್ಷೇತ್ರದ ಬರಗಾಲ ಪೀಡೀತ ಪ್ರದೇಶಕ್ಕೆ ನೀರು ಒದಗಿಸುವ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಇನ್ನೂ ಮಹೂರ್ತ ಕೂಡಿ ಬಂದಿಲ್ಲ. ಬಸವೇಶ್ವರ ನೀರಾವರಿ ಯೋಜನೆ ಪ್ರಾರಂಭಗೊಂಡು ನಾಲ್ಕು ವರ್ಷಗಳೇ ಕಳೆದರೂ ಕೂಡ ಇಲ್ಲಿಯರೆಗೆ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿಕೆ ನೀಡುತ್ತಾರೆ ಹೊರತು ಎಂದು ಪೂರ್ಣಗೊಳ್ಳಲಿದೆ ಎಂದು ಮಾತ್ರ ಸ್ಪಷ್ಟಪಡಿಸುತ್ತಿಲ್ಲ ಎಂದು ಆರೋಪಿಸಿದ ಅವರು ಅಥಣಿ ಮತಕ್ಷೇತ್ರದ ತೆಲಸಂಗ, ಕಕಮರಿ ಸುತ್ತ ಏಳು ಗ್ರಾಮಗಳಿಗೆ ನೀರಾವರಿ ಒದಗಿಸುವ ಅಮ್ಮಾಜೇಶ್ವರಿ ಯೋಜನೆ ಮಂಜೂರಾಗಿದೆ ಎಂದು ಹೇಳುತ್ತಿದ್ದಾರೆ ಹೊರತು ಈ ಯೋಜನೆಯ ಕಾರ್ಯ ಮಾತ್ರ ಈಗಲೂ ಪ್ರಾರಂಭವಾಗಿಲ್ಲ ಎಂದರು.
ಪಾರ್ಟಿಯ ಅಥಣಿ ಬ್ಲಾಕ್ ಅಧ್ಯಕ್ಷ ಶಿವಾನಂದ ಖೋತ ಮಾತನಾಡಿ, ಅಥಣಿ ಅಭಿವೃದ್ಧಿಯ ಕುರಿತು ಮತ್ತು ಅನದಾನ ಬಳಕೆಯ ಕುರಿತು ಸ್ಥಳೀಯ ಜನಪ್ರತಿನಿಧಿಗಳು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಹೀಗಾಗಿ ಇಲ್ಲಿಯವರೆಗೂ ಅನೇಕ ಪ್ರಮುಖ ಯೋಜನೆಗಳು ನನೆಗುದಿಗೆಗೆ ಬಿದ್ದಿವೆ ಎಂದರು. ಅಥಣಿ ಮತಕ್ಷೇತ್ರದಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತು ಇದ್ದರೂ ಕೂಡ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದ ಅವರು ಹೆಚ್ಚಿನ ಪ್ರಮಾಣದಲ್ಲಿ ರೈತರು, ಕಾರ್ಮಿಕರು, ವ್ಯಾಪಾರಸ್ಥರು ಸೇರಿದಂತೆ ಎಲ್ಲರೂ ನಮ್ಮ ಪಾರ್ಟಿಯ ಸದಸ್ಯರಾಗಿ ಆಗ ಮಾತ್ರ ನಮಗೆ ಮತ್ತು ನಮ್ಮ ಪಾರ್ಟಿಗೆ ಬಲ ಬರುತ್ತದೆ ಎಂದರು.
ಆಮ ಆದ್ಮಿ ಪಾರ್ಟಿಯ ಜಿಲ್ಲಾ ಸಂಯೋಜನಕ ರಾಜಕುಮಾರ ಟೋಪಣ್ಣವರ, ವಿನಾಯಕ ದೇಸಾಯಿ, ಬಾಳಾಸಾಹೇಬ ರಾವ್ ಮಾತನಾಡಿದರು. ಪಾರ್ಟಿಯ ದೇಹಲಿ ವೀಕ್ಷಕ ಉಪೇಂದ್ರ ಗಾಂವ್ಕರ, ಪಾರ್ಟಿಯ ಮುಖಂಡರಾದ ವಿಜಯ ಶಾಸ್ತ್ರಿಮಠ, ಶಂಕರ ಹೆಗ್ಡೆ, ಚನಗೌಡರ ಇಮಗೌಡರ, ಗುರಾ್ಪ ಮಗದುಮ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.