ಧಾರವಾಡ - ಹುಬ್ಬಳ್ಳಿ

ಸರ್ವಜನರ ಹಿತ ಸಾಧನೆಯೇ ಸಮಾಜವಾದದ ಗುರಿ: ಹಡಪದ

ಸರ್ವಜನರ ಹಿತ ಸಾಧನೆಯೇ ಸಮಾಜವಾದದ ಗುರಿ: ಹಡಪದ

ಧಾರವಾಡ 14: ಸರ್ವಜನರ ಹಿತ ಸಾಧನೆಯೇ ಸಮಾಜವಾದದ ಗುರಿ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ನೀತಿ ಸಮಾಜವಾದದ್ದಾಗಿದೆ ಎಂದು ಪತ್ರಕರ್ತ ಪುಂಡಲೀಕ ಹಡಪದ ಹೇಳಿದರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು. ದಿ. ರಾಚಪ್ಪ ಹಡಪದ ದತ್ತಿ ಅಂಗವಾಗಿ ಆಯೋಜಿಸಿದ್ದ  ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪ್ರಸ್ತುತ ರಾಜಕೀಯ ಹಾಗೂ ಸಮಾಜವಾದ’ ವಿಷಯ ಕುರಿತು ಅತಿಥಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, 19ನೇ ಶತಮಾನದಲ್ಲಿ ಶ್ರಮಜೀವಿ ವರ್ಗದ ಮಹಾನ್ ನಾಯಕ ಕಾರ್ಲಮಾರ್ಕ್ಸ ಅವರು ಶೋಷಣೆ ರಹಿತ, ವರ್ಗ ರಹಿತ ನವಸಮಾಜ ನಿರ್ಮಾಣದ ಕನಸು ಕಂಡಿದ್ದರು. ಶೋಷಿತ ವರ್ಗ ಘನತೆಯಿಂದ ಜೀವನ ನಡೆಸಬೇಕೆಂಬ ಸಿದ್ಧಾಂತ ಉಳ್ಳವರಾಗಿದ್ದರು. ರಾಮ ಮನೋಹರ ಲೋಹಿಯಾ, ಕೋಣಂದೂರ ಲಿಂಗಪ್ಪ ಹಾಗೂ ಶಾಂತವೇರಿ ಗೋಪಾಲಗೌಡರು ಶ್ರೇಷ್ಠ ಸಮಾಜವಾದಿಗಳಾಗಿ ಶೋಷಿತರ, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಪರವಾಗಿ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟರು. ದಿ. ರಾಚಪ್ಪ ಹಡಪದ ನೇರ ನುಡಿಯ ನ್ಯಾಯ ನಿಷ್ಠುರದ ಅಪರೂಪದ ವ್ಯಕ್ತಿಗಳು ಎಂದು ಹೇಳಿದರು.  

ಹಿರಿಯ ಚಿತ್ರಕಲಾವಿದ ಬಾಣದ ಮಾರುತಿ ಸನ್ಮಾನ ಸ್ವೀಕರಿಸಿ, ಮಾತನಾಡಿ, ಈ ದೇಶದಲ್ಲಿ ಜಾತಿಯತೆ ಎಂಬುದು ಅಭಿವೃದ್ಧಿಗೆ ಮಾರಕವಾಗಿದೆ. ದಿ. ರಾಚಪ್ಪ ಹಡಪದ ಅವರು ಎಲ್ಲ ಜಾತಿಯವರನ್ನು ಸಮಾನವಾಗಿ ಕಂಡವರು. ಬಸವಾದಿ ಶರಣರ ಕಾಯಕ ಹಾಗೂ ಸಮಾನತೆ ತತ್ವದಂತೆ ಬದುಕಿ, ತಮ್ಮ ಸತ್ಯಶುದ್ಧ ಕಾಯಕದ ಜೊತೆಗೆ ಸಮಾಜ ಸೇವೆ ಮಾಡಿದವರು. ಅಂತಹ ಸಮತಾವಾದಿಗಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಹೆಮ್ಮೆ ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ದಿ. ರಾಚಪ್ಪ ಹಡಪದ ಎಲ್ಲರನ್ನು ಪ್ರೀತಿಯಿಂದ ಸಮಾನವಾಗಿ ಕಾಣುತ್ತಿದ್ದ ವ್ಯಕ್ತಿ. ಧಾರವಾಡದ ಸಾಂಸ್ಕೃತಿಕ ನಗರಕ್ಕೊಬ್ಬ ಹೆಮ್ಮೆಯ ವ್ಯಕ್ತಿ ಎಂದು ಹೇಳಿದರು.  

ವೇದಿಕೆಯಲ್ಲಿ ದತ್ತಿದಾನಿ ರವಿರಾಜ ಹಡಪದ ಇದ್ದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.  

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹಡಪದ, ಸೋಮಣ್ಣ ಹಡಪದ, ಶಾಂತವೇರಿ ಬೆಟಗೇರಿ, ಯೋಗೇಶ ಹಡಪದ, ಸೇರಿದಂತೆ ಹಡಪದ ಪರಿವಾರದವರು ಇದ್ದರು. 


ಸುದ್ದಿ ಓದಿ