ಗದ್ದಲದ ಮಧ್ಯ ಸಾಮಾನ್ಯಸಭೆ ಸಕ್ಸಸ್: ಎಲ್ಲ ವಿಷಯಗಳಿಗೆ ಒಪ್ಪಿಗೆ
ಗುಳೇದಗುಡ್ಡ 14: ಪ್ರಸಕ್ತ ಸಾಲಿನ ಬಜಟ್ ಸಭೆ ಮುಗಿಯದೇ ಸಾಮಾನ್ಯಸಭೆ ಕರೆದಿದ್ದಿರಿ ನಿಯಮ ಬಾಹೀರವಾಗುತ್ತದೆ. ಇದರ ಬಗ್ಗೆ ತಮಗೆ ತಿಳಿದಿರದಿದ್ದರೇ ಜಿಲ್ಲಾ ಮಟ್ಟದ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿ ತಿಳಿದಿದ್ದೀರಾ. ಹಾಗೇನಾದರೂ ಸಭೆ ಅಸಿಂಧುವಾದರೆ ಪುರಸಭೆ ಸದಸ್ಯರಿಗೆ ಅವಮಾನವಾದಂತೆ ಎಂದು ಜೆಡಿಎಸ್ ಸದಸ್ಯ ಉಮೇಶ ಹುನಗುಂದ ಹಾಗೂ ಸಂತೋಷ ನಾಯನೇಗಲಿ, ಬಿಜೆಪಿಯ ಪ್ರಶಾಂತ ಜವಳಿ ಇವರು ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಉತ್ತರಿಸಲು ಪಟ್ಟುಹಿಡಿದ ಘಟನೆ ಸೋಮವಾರ ನಡೆಯಿತು.
ಮಾತಿನ ಚಕಮಕಿ, 2ಗಂಟೆ ಸಭೆ ವ್ಯರ್ಥ : ಪಟ್ಟಣದ ಪುರಸಭೆಯಲ್ಲಿ ಸೋಮವಾರ ಜರುಗಿದ ಪ್ರಸಕ್ತ ಸಾಲಿನ ಪ್ರಥಮ ಸಾಮಾನ್ಯ ಸಭೆಯ ಆರಂಭಕ್ಕೆ ಮಾತಿಕ ಚಕಮಕಿ ನಡೆದು ಸಭೆ ಬೆ.11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಗೊಂದಲದ ಗೂಡಾಗಿ ಪರಿಣಮಿಸಿತು. ಬಜಟ್ ಸಭೆ ಮಾಡಿಲ್ಲ ಸಾಮಾನ್ಯಸಭೆ ಕರೆದಿದ್ದಿರಿ. ಇದು ಕಾನೂನು ಬಹೀರ. ದಯವಿಟ್ಟು ಸಂಪೂರ್ಣ ತಿಳಿದುಕೊಂಡೆ ಸಭೆ ನಡೆಸಿ ಎಂದು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಪಟ್ಟುಹಿಡಿದಿದ್ದರಿಂದ ಕಕ್ಕಾಬಿಕ್ಕಿಯಾದ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಉತ್ತರಿಸಲು ತವಕಾಡಿದ ಘಟನೆ ಸುಮಾರು ಎರಡು ಗಂಟೆವರೆಗೆ ಸಭೆ ವ್ಯರ್ಥವಾಗಿ ನಡೆಯಿತು.
ಸಭೆ ನಿಯಂತ್ರಣಕ್ಕೆ ಕೈ ಸದಸ್ಯರ ಗಿಮಿಕ್: ಜೂ. 8 ರಂದು ಬಜಟ್ ಸಭೆ ನೆಲಕಚ್ಚಿದ್ದರಿಂದ ಅವಮಾನಿತರಾಗಿದ್ದ ಕಾಂಗ್ರೇಸ್ ಸದಸ್ಯರು ಈ ಸಭೆಗೆ ಸಂಪೂರ್ಣ ರಿಹಲ್ಸಲ್ ಮಾಡಿಕೊಂಡೆ ಬಂದಿದ್ದರು. ರಫೀಕ್ ಕಲ್ಬುರ್ಗಿ, ವಿಠ್ಠಲ ಕಾವಡೆ, ವಿನೋದ ಮದ್ದಾನಿ ಕೊನೆಗೆ ವಿರೋಧ ಪಕ್ಷದ ಸದಸ್ಯರನ್ನು ಸಮಜಾಯಿಸಿ, ಬಜಟ್ ಸಭೆಗೂ ಸಾಮಾನ್ಯ ಸಭೆಗೂ ಯಾವುದೇ ಸಂಬಂಧವಿಲ್ಲ. ನಾವು ಸಭೆ ನಡೆಸುತ್ತೇವೆ. ಒಂದು ವೇಳೆ ಜಿಲ್ಲಾಧಿಕಾರಿಗಳು ಸಭೆ ಮಾಡಿದ್ದು ತಪ್ಪು ಎಂದರೆ ನಾವು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಗಮನಕ್ಕೆ ತರುತ್ತೇವೆ. ಸ್ವತ: ಸದಸ್ಯರೆಲ್ಲ ಹೋಗಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡುತ್ತೇವೆ ಎಂದು ಧೈರ್ಯದಿಂದ ಗಿಮಿಕ್ ಉತ್ತರನೀಡಿ ಗದ್ದಲವನ್ನು ನಿಯಂತ್ರಣಕ್ಕೆ ತಂದು ಸಭೆ ನಡೆಸಿದರು.
ಮಹತ್ವದ ವಿಷಯಗಳಿಗೆ ಒಪ್ಪಗೆ ಪಡೆದ ಅಧ್ಯಕ್ಷರು: ಸಭೆಯಲ್ಲಿ ಮೊದಲೇ ನಿರ್ಧರಿಸಿದ ಸುಮಾರು 16 ಮಹತ್ವದ ವಿಷಯಗಳನ್ನು ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ 4 ವಿಷಯಗಳನ್ನು ಓದಿ ಸದಸ್ಯರ ಒಪ್ಪಿಗೆ ಪಡೆಯಲಾಯಿತು. ಕೆಲವು ವಿಷಯಗಳಿಗೆ ವಿರೋಧ ಪಕ್ಷದ ಸದಸ್ಯರು ಸಲಹೆ-ಸೂಚನೆ, ವಿರೋಧ ವ್ಯಕ್ತ ಪಡಿಸುತ್ತಲೇ ಅಧ್ಯಕ್ಷರನ್ನು, ಮುಖ್ಯಾಧಿಕಾರಿಗಳನ್ನು ತರಠೆಗೆ ತೆಗೆದುಕೊಳ್ಳುತ್ತದ್ದರು. ಪಟ್ಟಣದ ಅಭಿವೃದ್ಧಿಗೆ ಪ್ರಮುಖ ರಸ್ತೆಗಳ ಅಗಲೀಕರಣ, ನ್ಯಾಯಾಲಯಕ್ಕೆ ಸ್ಥಳ ನೀಡುವುದು, ಶವದ ವಾಹನದ ಬಾಡಿಗೆ 200 ರೂ.ಗೆ ನಿಗಧಿ ಪಡಿಸುವುದು, ಇತರೆ ಧರ್ಮದವರ ಶವ ಹೂಳಲು ಜೆಸಿಬಿ ಬಾಡಿಗೆ 500 ರೂ. ನಿಗದಿಪಡಿಸುವುದು, ಅಸ್ತಿತೆರಿಗೆ ಹೆಚ್ಚಳ ಮಾಡದಿರುವುದು, 2021-22 ನೇ ಸಾಲಿನ 15 ನೇ ಹಣಕಾಸಿನ ಅನುದಾನ 1.37 ಕೋಟಿ ಹಾಗೂ ಎಸ್.ಎಫ್.ಸಿ. ಅನುದಾನದ 1.50 ಕೋಟಿ ಗಳಿಗೆ ಎಲ್ಲ ಸದಸ್ಯರ ಸಲಹೆ ಮೇರೆಗೆ ಕ್ರಿಯಾ ಯೋಜನೆ ತಯಾರಿಸುವುದು, ಇಲ್ಲಿಯವರೆಗೆ ಕೋವಿಡ್ ನಿರ್ವಹಣೆಗೆ ಮಾಡಿದ ಖರ್ಚನ್ನು ತೆಗೆಯುವುದು, ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 20 ಲಕ್ಷ ರೂ. ಅನುದಾನದಲ್ಲಿ ಗೋಡೆ ನಿರ್ಮಿಸುವುದು, 36 ಲಕ್ಷ ರೂ. ಅನುದಾನದಲ್ಲಿ ಸೆಡ್ ನಿರ್ಮಿಸುವುದು, ಸದ್ಯದ ನೀರಿನ ದರ ಅರ್ಧಕ್ಕೆ ಕಡಿಮೆ ಮಾಡುವುದು ಸೇರಿದಂತೆ ಹಲವರು ವಿಷಯಗಳಿಗೆ ಸದಸ್ಯರಿಂದ ಒಪ್ಪಗೆ ಪಡೆದು ಅಧ್ಯಕ್ಷರು ಸಭೆಯನ್ನು ಯಶಸ್ವಿಗೊಳಿಸಿದರು.
ಕೇಳಿದ್ದು ಒಬ್ಬರಿಗಾದರೆ ಉತ್ತರಿಸೋರು ಇನ್ಯಾರೋ: ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಕೇಳಿದ ಯಾವುದೇ ಪ್ರಶ್ನೆಗೆ ಅಡಳಿತರೂಢ ಕಾಂಗ್ರೇಸ್ ಪಕ್ಷದ ಸದಸ್ಯರಾದ ವಿಠ್ಠಲ ಕಾವಡೆ, ರಫೀಕ್ ಕಲಬುರ್ಗಿ,ವಿನೋದ ಮದ್ದಾನಿ ಇವರೇ ಪದೇಪದೇ ಉತ್ತರ ನೀಡುತ್ತಿರುದನ್ನು ನೋಡಿ ಬೇಸರಗೊಂಡ ಜೆಡಿಎಸ್ ಸದಸ್ಯರಾದ ಉಮೇಶ ಹುನಗುಂದ, ಅಧಿಕಾರಿಗಳಾರೋ ಸದಸ್ಯರಾರೋ ನಮಗೆ ತಿಳಿಯುತ್ತಿಲ್ಲ ಪ್ರಶ್ನೆ ಯಾರಿಗೇ ಕೇಳಿದರೆ ಇನ್ಯಾರೋ ಉತ್ತರಿಸುತ್ತಾರೆಂದು ಬೇಸರ ವ್ಯಕ್ತಪಡಿಸುತ್ತಲೇ ವ್ಯಂಗ್ಯದ ಚಟಾಕಿ ಹಾರಿಸಿ ಸಭೆ ನಗುವಂತೆ ಮಾಡಿದರು.
ಅಧ್ಯಕ್ಷೆ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆ ಶರೀಫಾ ಮಂಗಳೂರ, ಸದಸ್ಯರಾದ ವಿಠ್ಠಲ ಕಾವಡೆ, ವಿನೋಧ ಮದ್ದಾನಿ, ರಫೀಕ್ ಕಲಬುರ್ಗಿ, ವಿದ್ಯಾ ಮುರಗೋಡ, ಕಾಶೀನಾಥ ಕಲಾಲ್,ಯಲ್ಲವ್ವ ಗೌಡರ್, ನಾಗರತ್ನಾ ಲಕ್ಕುಂಡಿ, ಅಮರೇಶ ಕವಡಿಮಟ್ಟಿ, ರಾಜವ್ವ ಹೆಬ್ಬಳ್ಳಿ, ರಾಜು ಹೆಬ್ಬಳ್ಳಿ, ಉಮೇಶ ಹುನಗುಂದ, ಸಂತೋಷ ನಾಯನಾಗಲಿ, ಪ್ರಶಾಂತ ಜವಳಿ, ಕಾಶೀನಾಥ ಕಲಾಲ, ಹಣಮಂತ ಗೌಡರ್, ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಸಿಬ್ಬಂದಿಗಳಾದ ಕುಮಾರ ತಟ್ಟಿಮಠ, ಶಿವಕುಮಾರ ಆಲೂರ, ಎಸ್.ಎಂ. ಸರಗಣಾಚಾರಿ ಸಭೆಯಲ್ಲಿದ್ದರು.