ಆಕಸ್ಮಿಕ ಬೆಂಕಿ ತಗುಲಿ ಐದು ಅಂಗಡಿಗಳು ಸಂಪೂರ್ಣ ಭಸ್ಮ
ಇಂಡಿ25: ಕಟ್ಟಿಗೆ ಅಡ್ಡೆ ಹಾಗೂ ಫರ್ನಿಚರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು, ಮಶೀನ್ಗಳು ಸುಟ್ಟು ಕರಕಲಾದ ಘಟನೆ ಭಾನುವಾರ ನಸುಕಿನ ಜಾವ ಸಂಭವಿಸಿದೆ.
ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿರುವ ವಿಶ್ವಕರ್ಮ ಸಮಾಜದ ಅಂಗಡಿ ಮುಂಗಟ್ಟುಗಳಲ್ಲಿ ಆಕಸ್ಮಿಕ ಬೆಂಕಿ ತಗಲಿದ್ದು. ಅವಘಡದಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಬೆಂಕಿಗಾಹುತಿ ಆಗಿವೆ.
ಬೆಂಕಿ ಅವಘಡಕ್ಕೆ ಸುಮಾರು ಐದು ಅಂಗಡಿಗಳು ಸಂಪೂರ್ಣ ಸುಟ್ಟಿದ್ದು. ಸುಮಾರು ಒಂದು ಕೋಟಿ ಬೆಲೆ ಬಾಳುವ ಯಂತ್ರಗಳು ಹಾಗೂ ಸಾಗವಾಣಿ ಕಟ್ಟಿಗೆ ಹಾನಿಯಾಗಿದೆ.
ಅಂಗಡಿಗಳು ಶಾಂತಪ್ಪ ಬಡಿಗೇರ, ಬಸವರಾಜ ಬಡಿಗೇರ, ಸಂಗು ಬಡಿಗೇರ, ಸಂತೋಷ ಬಡಿಗೇರ ಎಂಬವರಿಗೆ ಸೇರಿದ್ದು ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸೇವಾ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.
ಸ್ಥಳಕ್ಕೆ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ಭೇಟಿ ನೀಡಿ ವಿಶ್ವಕರ್ಮ ಸಮಾಜದವರಿಗೆ ಸಾಂತ್ವನ ಹೇಳಿ, ಸರಕಾರದಿಂದ ಸಹಾಯ ಮಾಡಿಸುವ ಭರವಸೆ ನೀಡಿದ್ದಾರೆ.