ರಾಣೆಬೆನ್ನೂರ

ಒಂದು ಕಾಳು ಕೂಡ ಕಟ್ಟದ ಕಾರಣ ಮನನೊಂದ ರೈತನಿಂದ ಸಂಪೂರ್ಣ ಬೆಳೆ ನಾಶ

ಒಂದು ಕಾಳು ಕೂಡ ಕಟ್ಟದ ಕಾರಣ ಮನನೊಂದ ರೈತನಿಂದ ಸಂಪೂರ್ಣ ಬೆಳೆ ನಾಶ

ರಾಣಿಬೆನ್ನೂರ,20: ಈ ಬಾರಿ ಮುಂಗಾರು ಹಂಗಾಮು ಉತ್ತಮವಾಗಿದ್ದಕ್ಕೆ ತಾಲ್ಲೂಕಿನ ಕಾಕೋಳ ಗ್ರಾಮದ ದ್ಯಾಮಪ್ಪ ದಿಳ್ಳೆಪ್ಪ ಹಿತ್ತಲಮನಿ ಎಂಬ ರೈತ ತನ್ನ 3 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಆಳೆತ್ತರ ಬೆಳೆದರೂ ಒಂದು ಕಾಳು ಕೂಡ ಕಟ್ಟದ ಕಾರಣ ಮನನೊಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಮೆಕ್ಕೆಜೋಳದ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ  ರೋಟಾವೇಟರ್ ಹೊಡೆಯುವ ಮೂಲಕ ಸಂಪೂರ್ಣ ನಾಶಪಡಿಸಿದ ಘಟನೆ   ನಡೆದಿದೆ.   

ದ್ಯಾಮಪ್ಪ ಎಂಬುವರಿಗೆ ಒಟ್ಟು 4 ಎಕರೆ ಜಮೀನು ಇದ್ದು, ಕಾಕೋಳ ಗ್ರಾಮದಲ್ಲಿಯೇ ಖಾಸಗಿ ಕೃಷಿ ಕೇಂದ್ರದಲ್ಲಿ ಟೆರಾ ಕಂಪನಿಯ ಮೆಕ್ಕೆಜೋಳದ ಬೀಜ ಖರೀದಿಸಿ, ಸರ್ವೆ ನಂ. 120 ರಲ್ಲಿ 2 ಎಕರೆ ಮತ್ತು 123 ನೇ ಸರ್ವೆ ನಂಬರಿನ 1 ಎಕರೆ ಸೇರಿ ಒಟ್ಟು 3 ಎಕರೆಗೆ  ಬಿತ್ತನೆ ಬೀಜ, ರಸ ಗೊಬ್ಬರ, ಕ್ರಿಮಿನಾಶಕ ಆಳು ಕಾಳು ಸೇರಿ 90 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದೇನೆ. ಬೆಳೆ ಮಾತ್ರ ಆಳೆತ್ತರವಾಗಿ ಹುಲಾಸಾಗಿ ಬೆಳೆದಿದ್ದು ನೋಡಲು ಎರಡು ಕಣ್ಣು ಸಾಲದು. ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ ದರ ಕ್ವಿಂಟಲ್‌ಗೆ 2500 ವರೆಗೆ ದರ ಇದ್ದು ಅಂದಾಜು 1.80  ಲಕ್ಷಕ್ಕೂ ಹೆಚ್ಚು ಹಾನಿಗೊಂಡಿದೆ. 

ಎಕರೆಗೆ 25 ರಿಂದ 30 ಕ್ವಿಂಟಲ್ ಬೆಳೆ ಬರಬಹುದು ಎಂದು ನೀರಿಕ್ಷಿಸಲಾಗಿತ್ತು. 3 ಎಕರೆ ಜಮೀನಿನಲ್ಲಿ ಬೆಳೆದ ಬೆಳೆಯ ತೆನೆಯಲ್ಲಿ ಒಂದು ಕಾಳು ಕೂಡ ಕಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ಬೇಟಿ ಮಾಡಿ ಮನವಿ ಮಾಡಿದೆ. ಹತ್ತಾರು ದಿನ ಕಾದರೂ ಅಧಿಕಾರಿಗಳಿಂದ ಯಾವುದೇ ಮಾಹಿತಿ ಸಿಗಲಿಲ್ಲ. ಅಧಿಕಾರಿಗಳು ಹೊಲಕ್ಕೆ ಬಂದು ಬೆಳೆ ಪರೀಶೀಲಿಸದ ಕಾರಣ ಮನಸ್ಸಿಗೆ ನೋವಾಗಿ ಇಂದು ಮೆಕ್ಕೆಜೋಳ ಬೆಳೆ ನಾಶಪಡಿಸಿದೆ ಎಂದು ರೈತರ ದ್ಯಾಮಪ್ಪ ಹಿತ್ತಲಮನಿ  ತಮ್ಮ ಅಳಲನ್ನು ತೋಡಿಕೊಂಡರು. 

ಕಾಕೋಳ ಗ್ರಾಮದ ಕೃಷಿ ಪ್ರಶಸ್ತಿ ಪುರಸ್ಕೃತ ಚನ್ನಬಸಪ್ಪ ಕೊಂಬಳಿ ಅವರು ಉದಯವಾಣಿಯೊಂದಿಗೆ ಮಾತನಾಡಿ, ಮುಂಗಾರು ಮಳೆ ಕೂಡ ಹೆಚ್ಚಾಗಿದೆ. ಬಿತ್ತನೆಗೂ ಮುನ್ನ ರೈತರು ಜಮೀನಿನಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ರೈತರು ಕೃಷಿ ಇಲಾಖೆಯಿಂದ ಖಾತರಿ ಪಡಿಸಿದ ಬಿತ್ತನೆ ಬೀಜಗಳನ್ನು ಖರೀದಿಸಬೇಕು. ರೈತ ದ್ಯಾಮಪ್ಪ ಬಿತ್ತನೆ ಮಾಡಿದ ಮೆಕ್ಕೆಜೋಳ ಉತ್ತಮವಾಗಿ ಬೆಳೆದಿದೆ. ಕಾಳು ಕಟ್ಟಿಲ್ಲ. ತೇವಾಂಶವೂ ಕೂಡ ಕಾರಣವಾಗಿದೆ. ಇದಕ್ಕೆಲ್ಲಾ ಕೃಷಿ ಇಲಾಖೆಯವರು ಪರೀಶೀಲನೆ ಮಾಡಿದ ಮೇಲೆ ಉತ್ತರ ಸಿಗಲಿದೆ.   

ಈ ಬಾರಿ ಮುಂಗಾರು ಹಂಗಾಮಿಗೆ ರೈತರು ಬೇಗ ಬಿತ್ತನೆ ಮಾಡಿದ್ದಾರೆ. ಹೆಚ್ಚಿನ ಮಳೆಗೆಕಳು ಕಟ್ಟುವ ಹಂತದಲ್ಲಿ ತೆನೆಯಲ್ಲಿನ ಪೋಲನ್ ಪುಡಿ ತೊಳೆದಿದೆ. ಕಾಕೋಳ ಗ್ರಾಮಕ್ಕೆ ಬೇಟಿ ನೀಡಿ ಪರೀಶೀಲಿಸುವೆ. 


ಸುದ್ದಿ ಓದಿ