ಇಂಡಿ

ನರೇಗಾ ಯೋಜನೆ ಹುಟ್ಟು ಹಾಕಿದ ದಿನವನ್ನು ನರೇಗಾ ದಿವಸ ಎಂದು ಆಚರಿಸುತ್ತೇವೆ: ಮದ್ದಿನ

ನರೇಗಾ ಯೋಜನೆ ಹುಟ್ಟು ಹಾಕಿದ ದಿನವನ್ನು ನರೇಗಾ ದಿವಸ ಎಂದು ಆಚರಿಸುತ್ತೇವೆ: ಮದ್ದಿನ

ಇಂಡಿ: ನರೇಗಾ ಯೋಜನೆ ಹುಟ್ಟು ಹಾಕಿದ ದಿನವನ್ನು ನರೇಗಾ ದಿವಸ ಎಂದು ಆಚರಿಸುತ್ತೇವೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರೊಂದಿಗೆ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಅಧಿಕಾರಿಗಳು ಕೂಡಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗುವ ಉದ್ದೇಶದಿಂದ ನರೇಗಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಹೇಳಿದರು. 

ತಾಲೂಕಿನ ಬಬಲಾದ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ನರೇಗಾ ದಿವಸ ಆಚರಣೆ ಮತ್ತು ಇ-ಶ್ರಮ ಚೀಟಿ ವಿತರಣೆ ಮಾಡಿ ಅವರು ಮಾತನಾಡಿದರು. 

ಅಕುಶಲ ಕಾರ್ಮಿಕರಿಗೆ ಜೀವ ವಿಮೆ ಮತ್ತು ಆರೋಗ್ಯ ತಪಾಸನೆಗೆ ಅನುಕೂಲವಾಗುವ ಇ-ಶ್ರಮ ಚೀಟಿಯ ಮಹತ್ವ ಕುರಿತು ವಿವರಿಸಿದರು. ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ದಿವಸವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.  

ಐಇಸಿ ಸಂಯೋಜಕಿ ಡಾ. ಜ್ಞಾನಜ್ಯೋತಿ ಚಾಂದಕವಟೆ ಮಾತನಾಡಿ, ನರೇಗಾ ದಿವಸ ಶುಭ ಕೋರುತ್ತಾ. ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ನರೇಗಾ ಬದ್ಧವಾಗಿದೆ. ವಲಸೆ ಹೋಗದೆ ಸ್ವ ಗ್ರಾಮದಲ್ಲಿ ಉದ್ಯೋಗ ಪಡೆದುಕೊಳ್ಳಿ ಎಂದರೂ. ನರೇಗಾ ಕಾರ್ಮಿಕರ ಮಕ್ಕಳ ಸುರಕ್ಷಿತ ಶಿಕ್ಷಣ, ಆರೈಕೆ ಸಲುವಾಗಿ ಜಿಲ್ಲೆಯಲ್ಲಿ  ಎರಡು ಶಿಶು ಪಾಲನಾ ಕೇಂದ್ರಗಳನ್ನು  ತೆರೆಯಲಾಗಿದೆ. ಅದರಲ್ಲಿ ಬಬಲಾದ ಮತ್ತು ಚವಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕರ ಸಂಖ್ಯೆ ಕೂಡ ಹೆಚ್ಚಿದೆ. ಆ ಕಾರ್ಮಿಕರ 2 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಈ ಸೌಲಭ್ಯ ನೀಡಲಾಗುತ್ತದೆ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.  

ಸಂಜೀವ ಕುಮಾರ ಬಿರಾದಾರ ಮಾತನಾಡಿ, ಜಲ ಸಂಜೀವಿನಿ ಕಾರ‌್ಯಕ್ರಮ ಕೈಗೊಳ್ಳ ಕುರಿತು ಸವಿವರವಾಗಿ ತಿಳಿಸಿ, ಮೂರು ವರ್ಷದ ಕ್ರಿಯಾಯೋಜನೆ ತಯಾರಿಕೆ ರೈತನ ಜಮೀನಿಗೆ ಭೇಟಿ ನೀಡಿ ಕಾಮಗಾರಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.  

ಆಡಳಿತ ಸಹಾಯಕ ಪ್ರದೀಪ ಹಿಳ್ಳಿ ಮಾತನಾಡಿ ನರೇಗಾ ಕಾರ್ಮಿಕರು ಒಗ್ಗಟ್ಟಿನಿಂದ ಗುಂಪಾಗಿ ಬಂದು ನಮೂನೆ 6 ರಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಕೆಲಸ ಪಡೆಯಿರಿ ಎಂದು ಸಲಹೆ ನೀಡಿದರು.  

ಗ್ರಾಮ ಪಂಚಾಯಿತಿ ಸದಸ್ಯ ಪೂಜಾರಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಜನರ ಒಳಿತಿಗೆ ನಾವು ಕೆಲ್ಸ ಮಾಡುತ್ತೇವೆ. ನರೇಗಾ ಕಾಮಗಾರಿಗಳನ್ನು ಪಾರದರ್ಶಕವಾಗಿ ರೈತರಿಗೆ ತಲುಪಿಸುತ್ತೇವೆ. ವಲಸೆ ಹೋಗದೆ ತಮ್ಮ ಮಕ್ಕಳ ಶಿಕ್ಷಣ ಅಗತ್ಯ ಅರಿತು ಊರಲ್ಲಿಯೇ ಉದ್ಯೋಗ ಪಡೆದು ಅವರನ್ನು ಸುಸುಕ್ಷಿತರನ್ನಾಗಿ ಮಾಡಿ ಎಂದು ಕಿವಿ ಮಾತು ಹೇಳಿದರು. 

ಕಾರ‌್ಯಕ್ರಮದಲ್ಲಿ ನರೇಗಾ ಯೋಜನೆಯಡಿ 100 ದಿನಗಳ ಕೆಲಸ ನಿರ್ವಹಿಸಿದ ಕಾರ್ಮಿಕರಾದ ಗಂಗಾಬಾಯಿ ರಾಮು ದಶವಂತ ಮತ್ತು ಮಾಳಪ್ಪ ಹಣಮಂತ ಬನಸೋಡೆ ಅವರನ್ನು  ಸನ್ಮಾನಿಸಲಾಯಿತು.  

ನಂತರ  ನರೇಗಾ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್‌  ಮಾಡಿ ಕೊಡವ ಸಲುವಾಗಿ ಕೂಲಿಕಾರರ ದಾಖಲೆಗಳನ್ನು ಪಡೆದೂ ಇ-ಶ್ರಮ ಚೀಟಿ ವಿತರಣೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಸಿದ್ರಾಯ ಬಿರಾದಾರ, ತಾಂತ್ರಿಕ ಸಹಾಯಕ ಶ್ರೀನಿವಾಸ ಪತಂಗೆ, ಹಣಮಂತ ಮೇಟಿ, ರಾಜು ಬಡಿಗೇರ, ಮಂಜುಳಾ ದಶವಂತ,  ಎಸ್‌. ಹಂಚನಾಳ,  ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಸಿಬ್ಬಂದಿ ಹಾಗೂ ಮನರೇಗಾ ಕಾರ್ಮಿಕರು ಭಾಗವಹಿಸಿದ್ದರು. ತಾಲೂಕಿನ ಬಬಲಾದ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ನರೇಗಾ ದಿವಸ ಆಚರಣೆ ಮತ್ತು ಇ-ಶ್ರಮ ಚೀಟಿಯನ್ನು ತಾಪಂ ಇಓ ಸುನೀಲ ಮದ್ದಿನ, ಗ್ರಾಪಂ ಅಧ್ಯಕ್ಷರು ವಿತರಣೆ ಮಾಡಿದರು. 


ಸುದ್ದಿ ಓದಿ