ಮೋದಿಯವರ ಆಡಳಿತ ದೇಶಕ್ಕೆ ಇನ್ನಷ್ಟು ವರ್ಷ ಬೇಕು: ಸವದಿ
ಲೋಕದರ್ಶನ ವರದಿ
ಅಥಣಿ 07: ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ದೇಶಕ್ಕೆ ಇನ್ನಷ್ಟು ವರ್ಷ ಬೇಕು ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.
ಅವರು 93 ನೇ ಬೂತ್ ಅಧ್ಯಕ್ಷ ರಾಜು ಗುಡೋಡಗಿ ಅವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಪತ್ರ ಅಭಿಯಾನ ಹಾಗೂ ಬೂತ್ ಅಧ್ಯಕ್ಷರ ನಿವಾಸಕ್ಕೆ ನಾಮ ಫಲಕ ಅಳವಡಿಸಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
20 ವರ್ಷಗಳ ಹಿಂದೆ ಅಕ್ಟೋಬರ 7 ರಂದು ಮೊಟ್ಟ ಮೊದಲ ಬಾರಿಗೆ ಗುಜರಾತ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು ಅಂದಿನಿಂದ ಇಂದಿನವರೆಗೂ ಸತತ 20 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. 13 ವರ್ಷ ಗುಜರಾತ ಮುಖ್ಯಮಂತ್ರಿಯಾಗಿ 7 ವರ್ಷ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2024 ರ ಚುನಾವಣೆಯ ನಂತರವೂ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಮತ್ತು ಬಿಜೆಪಿ ಆಡಳಿತ ದೇಶದ ಪ್ರಗತಿಗೆ ಬೇಕೇ ಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಗುಜರಾತ ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದ್ದಾರೆ ಹೀಗಾಗಿಯೇ ಎರಡು ದಶಕಗಳಿಂದಲೂ ಗುಜರಾತನಲ್ಲಿ ಬಿಜೆಪಿ ಆಡಳಿತ ಇದೆ. ದೇಶವನ್ನೂ ಕೂಡ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಈ ದೇಶದ ಜನತೆ ವಿಶ್ವಾಸ ಇಟ್ಟಿದ್ದು, ಇಂತಹ ಒಬ್ಬ ಸಮರ್ಥ ವ್ಯಕ್ತಿ ನಮ್ಮ ದೇಶಕ್ಕೆ ದೊರಕಿರುವುದು ನಮ್ಮ ಭಾಗ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಇವರನ್ನು 93 ಬೂತ್ ಅಧ್ಯಕ್ಷ ರಾಜು ಗುಡೋಡಗಿ ಸತ್ಕರಿಸಿದರು. ಬಿಜೆಪಿ ಧುರೀಣರಾದ ನಿಂಗಪ್ಪಾ ಖೋಕಲೆ, ಪ್ರಭಾಕರ ಚವ್ಹಾಣ, ರಾಜು ಚೌಗಲಾ, ದೀಪಕ್ ಟಿಕಾರೆ, ಅಜಿತ ಪವಾರ, ಅಕ್ಷಯ ಬುರ್ಲಿ, ರಾಜು ಢಾಲೆ, ಜನಕರಾಜ ದುರ್ಗಣ್ಣವರ, ಅಶೋಕ ದಾನಗೌಡರ, ಅಕ್ಷಯ ಕುಲಕರ್ಣಿ, ಅಮೃತ ಮಹಾಜನ, ಸುನೀಲ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗೋಪಾಲ ಅಪರಾಜ ನಿರೂಪಿಸಿದರು.