ಗುಳೇಗುಡ್ಡ

ಹಂಸನೂರ ಕಲಾವಿದೆಯರ ಕೊಡುಗೆ ಅಪಾರ : ಶ್ರೀಗಳು

ಹಂಸನೂರ ಕಲಾವಿದೆಯರ ಕೊಡುಗೆ ಅಪಾರ  : ಶ್ರೀಗಳು
ಗುಳೇದಗುಡ್ಡ ಸಮೀಪದ ಹಂಸನೂರ ಗ್ರಾಮದಲ್ಲಿ ಗಣ್ಯರು ರಂಗಕೃತಿ ಬಿಡುಗಡೆ ಮಾಡಿದರು.

ಗುಳೇದಗುಡ್ಡ 04: ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮ ರಂಗ ಕಲಾವಿದೆಯರ ತವರೂರು. ಉತ್ತರ ಕರ್ನಾಟಕದ ಹಂಸನೂರ ಗ್ರಾಮದ ಕೊಡುಗೆ ರಂಗಭೂಮಿಗೆ ಅಪಾರವಾಗಿದೆ. ಆದರೆ ಇಲ್ಲಿನ ರಂಗ ಕಲಾವಿದೆಯರನ್ನು ಸರ್ಕಾರ ಗುರ್ತಿಸುತ್ತಿಲ್ಲವೆಂದು ಶಿರೂರಿನ ಮಹಾಂತತೀರ್ಥ ಬಸವಲಿಂಗ ಶ್ರೀಗಳು ತಮ್ಮ ಕಳವಳ ವ್ಯಕ್ತಪಡಿಸಿದರು.

ಸಮೀಪದ ಹಂಸನೂರ ಗ್ರಾಮದಲ್ಲಿ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ಕಲಾವಿದರ ಕಾಶಿ: ಹಂಸನೂರಿನ ರಂಗ ಕಲಾವಿದೆಯರು ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. 

ನೂರಾರು ವರ್ಷಗಳಿಂದ ಹಂಸನೂರು ಅನೇಕ ರಂಗ ಕಲಾವಿದೆಯರನ್ನು ಕೊಟ್ಟಿದೆ.ಅಕ್ಷರ ಕಲಿಕೆ ಇಲ್ಲದಿದ್ದರೂ ಚಿಕ್ಕ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಬಣ್ಣ ಹಚ್ಚಕೊಂಡು ಅಭಿನಯಿಸಿದ ಇವರ ಸೇವೆ ಅನನ್ಯವಾಗಿದೆ. ಇವರನ್ನು ಸರ್ಕಾರ ಗುರ್ತಿಸಿ, ಇವರ ಕುಟುಂಬಗಳಿಗೆ ವಿಶೇಷ ಅನುದಾನದ ನೆರವು ನೀಡಬೇಕು. ಇವರ ರಂಗಾಸಕ್ತಿಯನ್ನು ಮುಂದುವರೆಯುವಂತೆ ಪ್ರೋತ್ಸಾಹಿಸಬೇಕು ಎಂದರು.  

ಕೃತಿ ಪರಿಚಯ ಮಾಡಿ ಡಾ. ಸಣ್ಣವೀರಣ್ಣ ದೊಡಮನಿ ಮಾಡಿ, ಸಂಶೋಧನೆ ಸಮಾಜಮುಖಿ ಚಿಂತನೆಯಿಂದ ಕೂಡಿರಬೇಕು. ಡಾ.ಮಲ್ಲಿಕಾರ್ಜುನ ಕುಂಬಾರ ಅವರ ಸಂಶೋಧನೆ ಸಮಾಜದ ಕಣ್ಣಾಗಿದೆ. ಅಕ್ಷರ ಕಲಿಯದ ಕಲಾವಿದೆಯರು ಹೊಟ್ಟೆ ಪಾಡಿಗಾಗಿ ನೀಲಿ ಕಣ್ಣಿನ ಮುಂದೆ ನಾಟ್ಯವಾಡಿ, ಅವರು ಪಟ್ಟ ಯಾತನೆಯನ್ನು ಹೃದಯದ ಕಣ್ಣಿನಿಂದ ಕಂಡು ನಿರೂಪಿಸಿದ್ದಾರೆ.  ಕಲಾವಿದೆಯರ ಸಂಕಟವನ್ನು ಕೋರೊನಾ ಕಾಲದಲ್ಲಿ ಕ್ಷೇತ್ರಕಾರ್ಯ ಮಾಡಿ, ಸಂಶೋಧನಾ ಮೌಲ್ಯ ಹೆಚ್ಚಿಸಿದ್ದಾರೆ. ಸಂಶೋಧಕನಿಗೆ ಕಲಾವಿದರ ಬಗೆಗೆ ಬರೆಯಲು ತಾಯ್ತನದ ಗುಣವಿದ್ದಾಗ ಮಾತ್ರ ಇಂತಹ ವಿಳಾಸವಿಲ್ಲದವರ ನೋವು ದಾಖಲಿಸಲು ಸಾಧ್ಯವೆಂದು ಅವರು ಹೇಳಿದರು.

ಕೃತಿ ಲೇಖಕ ಡಾ. ಮಲ್ಲಿಕಾರ್ಜುನ ಕುಂಬಾರ ಮಾತನಾಡಿ, ಹಂಸನೂರು ಕಲಾವಿದೆಯರ ತವರೂರು. ಇಲ್ಲಿ ರಂಗಕಲಾವಿದೆಯರು ತಮ್ಮ ಇಡೀ ಬದುಕನ್ನೇ ರಂಗಕಲೆಗೆ ಮೀಸಲಿಟ್ಟಿದ್ದಾರೆ. ಕೆಲವು ಹಿರಿಯ ಕಲಾವಿದರಂತೂ ಸರ್ಕಾರದ ಯಾವ ಸವಲತ್ತುಗಳನ್ನು ಪಡೆಯದೇ ಹೋದರು. ಅವರಿಗಾದ ನಿರ್ಲಕ್ಷ್ಯ ಸದ್ಯದ ಕಲಾವಿದೆಯರಿಗೆ ಆಗಬಾರದು. ಕಲಾವಿದೆಯರ ಕುಟುಂಬಗಳಿಗೆ ಸರ್ಕಾರ ಸಹಾಯ ಮಾಡಬೇಕಿದೆ. ಹಿರಿಯ ರಂಗ ಕಲಾವಿದೆಯರಿಗೆ ರಾಜ್ಯಮಟ್ಟದ ಪ್ರಶಸ್ತಿ, ಪುರಸ್ಕಾರ ನೀಡಬೇಕಾಗಿದೆ ಎಂದರು.

ಹಂಸನೂರ ಗ್ರಾಪಂ ಅಧ್ಯಕ್ಷ ರಂಗಪ್ಪ ತುಪ್ಪದ, ಉಪಾಧ್ಯಕ್ಷೆ ಆಶಾ ಚಿಂತಾಕಲ್, ಎಸ್.ಎಸ್.ಕಾಜಗಾರ, ವಿ.ಎಸ್.ಕೋರಿ ವೇದಿಕೆ ಮೇಲಿದ್ದರು. ಹಂಸನೂರಿನ ಕಲಾವಿದೆ ತಾರಾಶ್ರೀ, ಆಶಾ, ರೇಣುಕಾ, ರೋಜಾ ಸೇರಿದಂತೆ ಹದಿನೈದು ಜನರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎನ್.ಎಸ್.ಚಿಮ್ಮಲ ನಿರೂಪಿಸಿದರು. ಸಾಲಿಮಠ ವಂದಿಸಿದರು.

ಸುದ್ದಿ ಓದಿ