ಕಾಗವಾಡ

ಅನುದಾನ ಬಂದ ವರ್ಷದಲ್ಲಿ ಮಿನಿ ವಿಧಾನಸೌಧ ನಿರ್ಮಾಣ

ಅನುದಾನ ಬಂದ ವರ್ಷದಲ್ಲಿ ಮಿನಿ ವಿಧಾನಸೌಧ ನಿರ್ಮಾಣ

ತಹಸಿಲ್ದಾರ್ ರಾಜೇಶ್ ಬುರ್ಲಿ ಭರವಸೆ: ಫರೀದಾಖಾನ್‌ವಾಡಿಯಲ್ಲಿ ತಹಸಿಲ್ದಾರ್ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ 

ಶೇಡಬಾಳ : ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸುವುದರ ಜೊತೆಗೆ ಸರ್ಕಾರದಿಂದ ಜಾರಿಯಾಗಿರುವ ಯೋಜನೆಗಳನ್ನು,  ಸವಲತ್ತುಗಳನ್ನು ಸಾರ್ವಜನಿಕರಿಗೆ ಒದಗಿಸಲು ‘ನಮ್ಮ ನಡೆ ಹಳ್ಳಿಕಡೆ' ಅಭಿಯಾನದ ಮೂಲಕ ಗ್ರಾಮ, ಹಳ್ಳಿಗಳಲ್ಲಿ ಸಾರ್ವಜನಿಕ ಆಡಳಿತ ಕೊಂಡೊಯ್ಯಲಾಗುತ್ತಿದೆ ಎಂದು ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ತಿಳಿಸಿದರು. 

ಅವರು ಶನಿವಾರ ದಿ. 19 ರಂದು ಕಾಗವಾಡ ತಾಲ್ಲೂಕಿನ ಉಗಾರ ಪುರಸಭೆ ವ್ಯಾಪ್ತಿಯ ಪರೀಧಖಾನವಾಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತಹಶಿಲ್ದಾರರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು. 

ಪಂಚಾಯತ ರಾಜ್, ಕಂದಾಯ, ಕೃಷಿ, ಶಿಕ್ಷಣ, ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಅನೇಕ ಕಾರ್ಯಗಳಿಗಾಗಿ ಸಾರ್ವಜನಿಕರಿಗೆ ತಾಲೂಕು ಜಿಲ್ಲಾ ಕೇಂದ್ರಗಳಿಗೆ ಅಲೆಯಲು ಆಗುವುದಿಲ್ಲ. ಕೆಲಸಗಳು ನನೆಗುದಿಗೆ ಬಿದ್ದು ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ. ಇದನ್ನು ಮನಗಂಡು ಸರಕಾರ ‘ತಹಶಿಲ್ದಾರರ ನಡೆ ಹಳ್ಳಿಕಡೆ' ಕಾರ್ಯಕ್ರಮ ಹಾಕಿಕೊಂಡಿದ್ದೇವೆಂದು ಹೇಳಿದರು.  

ಈ ಕಾರ್ಯಕ್ರಮದ ಅಂಗವಾಗಿ ಸಂಬಂಧಪಟ್ಟ ಇಲಾಖೆಯ ಸುಮಾರು 25 ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ನಿಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಸಾಧ್ಯವಾದರೆ ಸ್ಥಳದಲ್ಲಿಯೇ ಅವುಗಳನ್ನು ಇತ್ಯರ್ಥ ಮಾಡುತ್ತಾರೆ. ಸಾರ್ವಜನಿಕರು ತಮ್ಮ ಕುಂದುಕೊರತೆ ಅಹವಾಲುಗಳನ್ನು ಸಲ್ಲಿಸಬೇಕು ಎಂದು ಹೇಳಿದರು. ಗ್ರಾಮದ ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.  

ಕಾರ್ಯಕ್ರಮದ ಅಂಗವಾಗಿ ಇಂದು ಮುಂಜಾನೆ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಹಾಗೂ ಆಯಾ ಇಲಾಖೆ ಅಧಿಕಾರಿಗಳು ಫರೀದಖಾನವಾಡಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಅಧಿಕಾರಿಗಳನ್ನು ಸ್ವಾಗತಿಸಿಕೊಂಡರು. ಅಧಿಕಾರಿಗಳ ತಂಡ ಗ್ರಾಮದ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. 

ಇದೇ ವೇಳೆ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ಸಂಬಂಧಿಸಿದ ಯೋಜನೆ ಹಾಗೂ ಸಮಸ್ಯೆ ಗಳಿಗೆ ಪರಿಹಾರದ ಬಗ್ಗೆ ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎಸ್ ವಿ ಗೀರೀಶ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿರನಗೌಡ ಎಗನಗೌಡರ, ಬಿಇಒ ಎಮ್ ಆರ್ ಮುಂಜೆ, ಸಿಡಿಪಿಒ ಸಂಜೀವಕುಮಾರ ಸದಲಗೆ, ಸಿಪಿಐ ಶಂಕರಗೌಡ ಬಸನಗೌಡರ, ಉಪ ತಹಶಿಲ್ದಾರ ಅಣ್ಣಾಸಾಹೇಬ ಕೋರೆ, ಸುಭಾಷ ಅಸೂದೆ, ಎಂ.ಆರ್‌.ಪಾಟೀಲ, ಪುರಸಭೆ ಸದಸ್ಯ ಪ್ರಪುಲ ಥೋರುಸೆ, ಮುಖಂಡ ವೀರಭದ್ರ ಕಟಗೇರಿ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿ, ಪುರಸಭೆ ಸದಸ್ಯರು ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ