ಎ.ಆರ್.ಜಿ ಕಂಪನಿಗೆ ಬೆಂಬಲಿಸುವ ತಾಲೂಕು ಆಡಳಿತ ಕ್ರಮ ಖಂಡಿಸಿ ಸಭೆ ಬಹಿಷ್ಕಾರ
ಹಗರಿಬೊಮ್ಮನಹಳ್ಳಿ 29: ತಾಲೂಕಿನ ಮರಬ್ಬಿಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಲೋಕಪ್ಪನ ಹೊಲ ಗ್ರಾಮದ ಹತ್ತಿರ ಎಸ್.ಎಲ್.ಆರ್ ಕಂಪನಿ ಒಡೆತನದ ಮತ್ತೊಂದು ಕಂಪನಿ ಎ.ಆರ್.ಜಿ ಹೆಸರಿನಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವುದನ್ನು ಗ್ರಾಮ ಪಂಚಾಯತಿಯ ಸಭೆಯಲ್ಲಿ ಸರ್ವಸದಸ್ಯರು ವಿರೋಧಿಸಿ ದಿ. 27ರಂದು ಠರಾವು ಪಾಸು ಮಾಡಿದರೂ ತಾಲೂಕು ಆಡಳಿತ ಕಂಪನಿಯ ವಿರುದ್ಧ ಕ್ರಮ ಜರುಗಿಸದಿರುವುದನ್ನು ವಿರೋಧಿಸಿ ಗ್ರಾಮ ಪಂಚಾಯತಿಯ 4ನೇ ಸಾಮಾನ್ಯ ಸಭೆಯನ್ನು 16ಜನ ಸದಸ್ಯರು ಬಹಿಷ್ಕಾರ ಹಾಕಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಲೋಕಪ್ಪನ ಹೊಲದ ಹತ್ತಿರ ನಾರಾಯಣದೇವರಕೆರೆ ಗ್ರಾಮಕ್ಕೆ ಸೇರಿದ ಸ.ನಂ.653, 654ರಲ್ಲಿ ಎ.ಆರ್.ಜಿ ಅನ್ನುವ ಕಂಪನಿ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿಗೆ ತೆರಿಗೆ ಪಾವತಿ ಮಾಡದೇ ಕಟ್ಟಡ ಕಟ್ಟಲು ಪರವಾನಿಗೆಯನ್ನು ಪಡೆಯದೇ ನಿರ್ಮಾಣ ಮಾಡುತ್ತಿದ್ದು, ಈ ಬಗ್ಗೆ ಕಂಪನಿಯ ವ್ಯವಸ್ಥಾಪಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಪರಿಸರಕ್ಕೆ ಧಕ್ಕೆಯಾಗುವ ಕಂಪನಿಯನ್ನು ತಡೆಹಿಡಿಯಿರಿ ಎಂದು ಹೇಳಿದರೂ ಇದುವರೆಗೂ ಕಂಪನಿ ನಿರ್ಮಾಣವಾಗುವುದನ್ನು ತಡೆಯಲು ವಿಫಲವಾಗಿರುವ ತಾಲೂಕು ಆಡಳಿತದ ಕ್ರಮವನ್ನು ವಿರೋಧಿಸುತ್ತೇವೆ ಎಂದು ಗ್ರಾಮ ಪಂಚಾಯತಿ ಸದಸ್ಯ ಡಿ.ಹುಲುಗಪ್ಪ ಹೇಳಿದರು.
ಕೈಗಾರಿಕಾ ನಿಯಮಗಳ ಪ್ರಕಾರ ಕಂಪನಿಯವರು ಕಟ್ಟಡ ನಿರ್ಮಾಣ ಮಾಡುವಾಗ ಮೂಲ ಬಂಡವಾಳದ ಆಧಾರದ ಮೇಲೆ ಪಂಚಾಯತಿಗೆ ತೆರಿಗೆ ಪಾವತಿ ಮಾಡಬೇಕು. ಅದು ಅಲ್ಲದೇ ತುಂಗಭದ್ರ ನದಿ ಹಿನ್ನೀರಿಗೆ ಸಮೀಪದಲ್ಲೇ ಕಂಪನಿ ನಿರ್ಮಾಣವಾಗುತ್ತಿರುವುದರಿಂದ ನದಿ ನೀರು ಮಲಿನವಾಗಲಿದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಕೊಟ್ಟಿರುವುದಿಲ್ಲ. ಆದರೂ ಕಂಪನಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವುದು ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಂಚನೆ ಮಾಡಿದಂತಾಗಿದೆ ಎಂದು ಸದಸ್ಯ ಕೆ.ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸದಸ್ಯ ಯಮುನಪ್ಪ, ಶಂಕರನಾಯ್ಕ, ಧರ್ಮಾನಾಯ್ಕ, ನಕ್ರಾಳ್ ಗೋಣೆಪ್ಪ, ದ್ಯಾಮಪ್ಪ, ಅಖಿಲಾಭಾನು, ಜಮಿನಿಬಾಯಿ, ಹಳ್ಳಮ್ಮ, ಹುಲಿಗೆಮ್ಮ, ಶಿಲ್ಪ, ತಳವಾರ ನೀಲಮ್ಮ, ಶಮೀನಾಬೇಗಂ, ತುಳಜಾಬಾಯಿ, ಹನುಮಂತಪ್ಪ ಇದ್ದರು.