ಅಥಣಿ

ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ

ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ

ವಿಶೇಷ ನ್ಯಾಯಾಲಯ ಸ್ಥಾಪಿಸಿ ಶೀಘ್ರ ಗಲ್ಲು ಶಿಕ್ಷೆ ನೀಡಲು ಆಗ್ರಹ 

ಅಥಣಿ 18: ಹಿರೇಕೊಡಿಯ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆರೋಪಿಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ಅತೀ ಶೀಘ್ರದಲ್ಲಿಯೇ ಗಲ್ಲು ಶಿಕ್ಷೆ ನೀಡಬೇಕು ಎಂದು ಹಿರಿಯ ನ್ಯಾಯವಾದಿ, ಜೈನ್ ಸಮಾಜದ ಮುಖಂಡ ಕೆ.ಎ.ವಣಜೊಳ ರಾಜ್ಯ ಸರಕಾರವನ್ನು ಆಗ್ರಹಿಸಿದರು.  

ಅಥಣಿ ಡಿಎಸ್ ಪಿ ಶ್ರೀಪಾದ ಜಲದೆ ಹಾಗೂ ಸಿಪಿಐ ರವೀಂದ್ರ ನಾಯ್ಕೊಡಿ ಇವರ ಪ್ರಾಥಮಿಕ ತನಿಖೆಯಿಂದಲೇ ಮೊಟ್ಟ ಮೊದಲ ಬಾರಿಗೆ ಮುನಿ ಮಹಾರಾಜರ ಕೊಲೆ ರಹಸ್ಯ ಬಯಲಾಗಿದೆ ಮತ್ತು ಆರೋಪಿಗಳ ಬಂಧನವಾಗಿದೆ ಎಂದ ಅವರು ಕೊಲೆಯಾದ ಕಾಮಕುಮಾರ ಮಹಾರಾಜರ ಪೂರ್ವಾಶ್ರಮದ ಗ್ರಾಮ ಅಥಣಿ ತಾಲೂಕಿನ ಖವಟಕೊಪ್ಪ ಹೀಗಾಗಿ ಅವರ ಕೊಲೆ ಅಥಣಿ ತಾಲೂಕಿನ ಜೈನ್ ಸಮುದಾಯ ಬಾಂಧವರಲ್ಲಿ ಆಕ್ರೋಷ ಗೊಂಡಿದ್ದು, ಸರಕಾರ ವಿಶೇಷ ನ್ಯಾಯಾಲಯದ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.  

ಮುನಿ ಮಹಾರಾಜರ ಕೊಲೆ ಪ್ರಕರಣದ ಕುರಿತಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ವಿಧಾನ ಮಂಡಲ ಅಧಿವೇಶನ ದಲ್ಲಿ ಪ್ರಸ್ತಾಪಿಸಿ ಸದನದ ಗಮನ ಸೆಳೆದಿದ್ದಲ್ಲದೆ ವಿಶೇಷ ತಂಡ ರಚಿಸಿ ಕೊಲೆ ರಹಸ್ಯ ಬಯಲು ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ ಎಂದ ಅವರು ಮುನಿ ಮಹಾರಾಜರ ಹತ್ಯೆ ಖಂಡಿಸಿ ಇಡೀ ದೇಶದಲ್ಲಿ ಮೌನ ಮೆರವಣಿಗೆ ನಡೆಸಲಾಗುತ್ತಿದೆ ಎಂದರು.  

ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಜೈನ್ ಸಮುದಾಯದ ಅರುಣ ಯಲಗುದ್ರಿ, ಅಮರ ದುರ್ಗಣ್ಣವರ, ಜಿನಗೌಡ ಪಾಟೀಲ ಸೇರಿದಂತೆ ಅನೇಕರು ಮಾತನಾಡಿ ಆರೋಪಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.  ಆದಿನಾಥ ದಿಗಂಬರ ಜೈನ ಸಮಿತಿ, ಅಥಣಿ ತ್ರಿಶಲಾದೇವಿ ಮಹಿಳಾ ಮಂಡಳ ಹಾಗೂ ಅಥಣಿ ತಾಲೂಕಾ ಸಮಸ್ತ ಜೈನ ಸಮಾಜದಿಂದ ಗ್ರೇಡ್ 2 ತಹಶಿಲ್ದಾರ ಬಿ.ಜಿ.ಕುಲಕರ್ಣಿ ಇವರಿಗೆ ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಸಮಸ್ತ ಜೈನ್ ಸಮಾಜದ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ