ಗೋಕಾಕ್

ರೈತ-ಕಾರ್ಮಿಕರನ್ನು ಹತ್ತಿಕ್ಕುವ ಕ್ರಮ ಖಂಡನೀಯ

ರೈತ-ಕಾರ್ಮಿಕರನ್ನು ಹತ್ತಿಕ್ಕುವ ಕ್ರಮ ಖಂಡನೀಯ
ಗೋಕಾಕ: ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ಅವರು ಮಾತನಾಡುತ್ತಿರುವದು.

ಗೋಕಾಕ 23: ಕೇಂದ್ರ ಸರಕಾರ ರೈತ ವಿರೋಧಿ ಮಸೂದೆಗಳು ಹಾಗೂ ಕಾರ್ಮಿಕ ಕಾನೂನುಗಳನ್ನು ಬದಲಿಸಿ ರೈತ-ಕಾರ್ಮಿಕರನ್ನು ಹತ್ತಿಕ್ಕಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿರುವದು ಅತ್ಯಂತ ಖಂಡನೀಯ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಹೇಳಿದರು.

ಶನಿವಾರ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ರೈತ-ಕಾರ್ಮಿಕ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಸಿಐಟಿಯು ಸಂಘಟಿಸಿದ ಪ್ರಚಾರ ಜಾಥಾ ನಗರಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಕೇಂದ್ರದ ಬಿಜೆಪಿ ಸರಕಾರ ಬಂಡವಾಳಶಾಹಿಗಳ ಕೈಗೊಂಬೆಯಾಗಿ ರೈತ-ಕಾರ್ಮಿಕರ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇದನ್ನು ರೈತ-ಕಾರ್ಮಿಕರು ತಡೆಯದಿದ್ದರೆ ಇಡೀ ದೇಶವನ್ನೇ ಬಂಡವಾಳಶಾಹಿಗಳಿಗೆ ಮಾರುವ ಹುನ್ನಾರ ನಡೆಸಿದೆ.  ಅದಕ್ಕಾಗಿ ರೈತ-ಕಾರ್ಮಿಕರು ಒಂದಾಗಿ ಎರಡನೇ ಸ್ವಾತಂತ್ರ್ಯಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕೆಂದು ವರಲಕ್ಷ್ಮೀ ಹೇಳಿದರು. 

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜೇರಿ, ಮುನೀರಾ ಮುಲ್ಲಾ, ಗ್ರಾ.ಪಂ. ನೌಕರರ ಸಂಘದ ಮಡ್ಡೆಪ್ಪ ಭಜಂತ್ರಿ, ರಮೇಶ ಹೋಳಿ, ಕಲ್ಲಪ್ಪ ಮಾದರ, ಬಸವರಾಜ ರೊಡ್ಡನವರ, ಬಿಸಿಯೂಟ ನೌಕರರ ಸಂಘದ ಪಾರ್ವತಿ ಕೌಜಲಗಿ, ಮಾಸಾಬ್ಬಿ ಢಾಲಾಯತ, ಮೀನಾಕ್ಷಿ ಕರೆಮ್ಮನವರ, ಕೆಪಿಟಿಸಿಎಲ್ ನೌಕರರ ಸಂಘದ ನಾಗಾರ್ಜುನ ಹೊಳೆಯಾಚಿ, ಆನಂದ ಅಂಗಡಿ ಸೇರಿದಂತೆ ಸಾವಿರಾರು ಸಿಐಟಿಯು ಕಾರ್ಯಕರ್ತರು ಇದ್ದರು.


ಸುದ್ದಿ ಓದಿ